ಮುಂಬಯಿ: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಎಡ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ(Hardik Pandya) ಅವರು ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಾಳೆ(ನವೆಂಬರ್ 2ರಂದು) ಮುಂಬೈಯಲ್ಲಿ ನಡೆಯುವ ಶ್ರೀಲಂಕಾ(IND vs SL) ವಿರುದ್ಧದ ಪಂದ್ಯಕ್ಕೂ ಮುನ್ನ ಪಾಂಡ್ಯ ಅವರು ತಂಡ ಸೇರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ತಂಡ ಸೇರುವುದು ಖಚಿತ
“ಹಾರ್ದಿಕ್ ಪಾಂಡ್ಯ ಅವರು ಸದ್ಯ ಉತ್ತಮ ಚೇತರಿಕೆಯ ಹಾದಿಯಲ್ಲಿದ್ದಾರೆ. ಅವರು ಬುಧವಾರ ರಾತ್ರಿಯ ಒಳಗಡೆ ಮುಂಬೈಯಲ್ಲಿ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. ಆದರೆ ಅವರು ಶ್ರೀಲಂಕಾ ವಿರುದ್ಧ ಕಣಕ್ಕಿಳಿಯುವ ಬಗ್ಗೆ ನಮಗೆ ಮಾಹಿತಿ ಇಲ್ಲ” ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.
ಸೆಮಿಫೈನಲ್ನಲ್ಲಿ ಕಣಕ್ಕೆ
ಇನ್ನೊಂದು ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಅವರು ತಂಡ ಸೇರಿದರೂ ಕೂಡ ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲ ಲೀಗ್ ಪಂದ್ಯಗಳಿಂದಲೂ ಹೊರಗುಳಿಯಲಿದ್ದು ಸೆಮಿಫೈನಲ್ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಭಾರತ ಆಡಿದ 6 ಪಂದ್ಯಗಳಲ್ಲಿ ಆರೂ ಪಂದ್ಯ ಗೆದ್ದು 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೆ ಅಧಿಕೃತವಾಗಿ ಸೆಮಿ ಫೈನಲ್ ಪ್ರವೇಶ ಪಡೆಯಲಿದೆ. ಇದು ಭಾರತಕ್ಕೆ ಕಷ್ಟವೇನು ಅಲ್ಲ. ಹೀಗಾಗಿ ಪಾಂಡ್ಯಗೆ ಮತ್ತಷ್ಟು ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ IND vs ENG: ಬುಮ್ರಾ ಬೌಲಿಂಗ್ ಪ್ರದರ್ಶನ ಕೊಂಡಾಡಿದ ಪಾಕಿಸ್ತಾನದ ಮಾಜಿ ಸ್ಟಾರ್ ವೇಗಿ
ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ಹಿಂದೇಟು
ಒಂದೊಮ್ಮೆ ಪಾಂಡ್ಯ ಅವರನ್ನು ಆತುರದಲ್ಲಿ ಆಡಿಸಿದರೆ ಅವರು ಮತ್ತೆ ಗಾಯಗೊಂಡರೆ ಟೂರ್ನಿಯಿಂದ ಹೊರಬೀಳುವುದು ಖಚಿತ. ಪಾಂಡ್ಯ ಸ್ಥಾನಕ್ಕೆ ಸದ್ಯ ಯಾವುದೇ ಆಲ್ ರೌಂಡರ್ ಕೂಡ ತಂಡದಲ್ಲಿಲ್ಲ. ಶಾರ್ದೂಲ್ ಠಾಕೂರ್ ಅವರು ಇದ್ದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಈ ಎಲ್ಲ ವಿಚಾರವನ್ನು ಮನಗಂಡು ಬಿಸಿಸಿಐ ಪಾಂಡ್ಯ ಅವರನ್ನು ಲೀಗ್ ಪಂದ್ಯಗಳಿಂದ ದೂರ ಇರಿಸಿ ಸೆಮಿಫೈನಲ್ನಲ್ಲಿ ಕಣಕ್ಕಿಳಿಸುವ ಯೋಚನೆಯಲ್ಲಿದ್ದಂತೆ ತೋರುತ್ತಿದೆ.
ಇದನ್ನೂ ಓದಿ ‘ಘನತೆಗೆ ತಕ್ಕಂತೆ ನಡೆದುಕೊಳ್ಳಿ’ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ವಿರುದ್ದ ಹರಿಹಾಯ್ದ ಅಫ್ರಿದಿ
ಸೂರ್ಯಕುಮಾರ್ಗೆ ಅವಕಾಶ
ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್ ಯಾದವ್ ಮುಂದಿನ ಲೀಗ್ ಪಂದ್ಯಗಳಲ್ಲಿಯೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಪಾಂಡ್ಯ ಬರುವವರೆಗೆ ಅವರಿಗೆ ಚಿಂತೆಯಿಲ್ಲ. ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 49 ರನ್ ಬಾರಿಸಿ ಸೂರ್ಯ ತಂಡಕ್ಕೆ ಆಸರೆಯಾಗಿದ್ದರು. ಇವರು ಬಾರಿಸಿದ ಈ ಮೊತ್ತದಿಂದಾಗಿ ಭಾರತ 200 ರನ್ಗಳ ಗಡಿ ದಾಟುಂತಾಗಿತ್ತು.
ಬೌಂಡರಿ ತಡೆಯುವ ಯತ್ನದಲ್ಲಿ ಗಾಯಗೊಂಡಿದ್ದ ಪಾಂಡ್ಯ
ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 19ರಂದು ಪುಣೆಯಲ್ಲಿ ನಡೆದಿದ್ದ ಪಂದ್ಯದ 9ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಅವರು ಲಿಟನ್ ದಾಸ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಸ್ಲಿಪ್ ಆಗಿ ಕೆಳಗೆ ಬಿದ್ದು ಪಾದದ ಗಾಯಕ್ಕೆ ತುತ್ತಾಗಿದ್ದರು. ಬಳಿಕ ನೋವಿನಿಂದಾಗಿ ಮೈದಾನ ತೊರೆದಿದ್ದರು. ಪಾಂಡ್ಯ ಅವರ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಅವರು ಪೂರ್ಣಗೊಳಿಸಿದ್ದರು. ಗಾಯಗೊಂಡು ಮೈದಾನದಿಂದ ಹೊರ ನಡೆದ ಪಾಂಡ್ಯ ಸಂಪೂರ್ಣವಾಗಿ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಅವರು ಬದಲಿ ಆಟಗಾರನಾಗಿ ಫೀಲ್ಡಿಂಗ್ ನಡೆಸಿದ್ದರು.