Site icon Vistara News

ಜಯ್​ ಶಾ ಬ್ಲ್ಯಾಕ್ ಮ್ಯಾಜಿಕ್​ನಿಂದ ಪಾಕ್​ಗೆ​ ಸೋಲು; ಟಿವಿ​ ನಿರೂಪಕಿ ಗಂಭೀರ ಆರೋಪ

hareem shah

ಕರಾಚಿ: ಕಳೆದ ಶನಿವಾರ ಅಹಮದಾಬಾದ್​ನಲ್ಲಿ ನಡೆದ ಭಾರತ ವಿರುದ್ಧದ ಏಕದಿನ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್​ಗಳ ಸೋಲು ಕಂಡಿತು. ಈ ಸೋಲಿಗೆ ಕೇಂದ್ರ ಗೃಹ ಸಚಿವ ಅಮೀತ್​ ಶಾ ಅವರ ಪುತ್ರ, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರ ಮಾಟ-ಮಂತ್ರವೇ ಪ್ರಮುಖ ಕಾರಣ ಎಂದು ಪಾಕಿಸ್ತಾನದ ಟಿವಿ ನಿರೂಪಕಿ ಹಾಗೂ ಟಿಕ್​-ಟಾಕ್​ ಸ್ಟಾರ್​ ಹರೀಮ್​ ಶಾ(Hareem Shah) ಗಂಭೀರ ಆರೋಪ ಮಾಡಿದ್ದಾರೆ.

ಟ್ವಿಟರ್​ನಲ್ಲಿ ದೊಡ್ಡದಾದ ಟಿಪ್ಪಣಿಯನ್ನೇ ಬರೆದಿರುವ ಹರೀಮ್​ ಶಾ, “ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಪಾಕಿಸ್ತಾನ ಕ್ರಿಕೆಟ್‌ ತಂಡ ಸೋಲುವಂತೆ ಮಾಟ-ಮಂತ್ರದ ಮರೆ ಹೋಗಿದ್ದಾರೆ. ಈ ವಿಚಾರ ನನಗೆ ಬಲ್ಲ ಮೂಲಗಳಿಂದ ತಿಳಿದಿದೆ. ಮಾಟ-ಮಂತ್ರ ಮಾಡಲು ಪ್ರಸಿದ್ಧ ಜಾದೂ ತಜ್ಞ ಕಾರ್ತಿಕ್ ಚಕ್ರವರ್ತಿ ಅವರಿಗೆ ಅಪಾರ ಪ್ರಮಾಣದ ಹಣವನ್ನು ನೀಡಿದ್ದಾರೆ.” ಎಂದು ಟ್ವಿಟ್ಟರ್‌ ಎಕ್ಸ್​ನಲ್ಲಿ ಬರೆದಿದ್ದಾರೆ.​

ಜಯ್​ ಶಾ ಅವರ ದುಷ್ಕೃತ್ಯದ ಬಗ್ಗೆ ಐಸಿಸಿ ಸಮಗ್ರ ತನಿಖೆ ನಡೆಸಬೇಕು ಅಲ್ಲದೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹರೀಮ್​ ಶಾ ಆಗ್ರಹಿಸಿದ್ದಾರೆ. ‘ಪಾಕಿಸ್ತಾನ ತಂಡ ಒಂದು ಹಂತದಲ್ಲಿ 155 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ಆ ಬಳಿಕ ಹಠಾತ್​ ಕುಸಿತ ಕಂಡು 36 ರನ್​ ಅಂತರದಲ್ಲಿ ಎಲ್ಲ ವಿಕೆಎಟ್​ ಕಳೆದುಕೊಂಡು ಸಂಕಷ್ಟ ಎದುರಿಸಿತು. ಇದರ ಹಿಂದಿರುವ ಶಕ್ತಿ ಭಾರತೀಯ ಬೌಲರ್​ಗಳದಲ್ಲ. ಬದಲಾಗಿ ಇದು ಜಯ್​ ಶಾ ಅವರ ಮಾಟ-ಮಂತ್ರದ ತಂತ್ರ” ಎಂದು ಹೇಳಿದ್ದಾರೆ.

ಪಂದ್ಯದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ಮಿಕಿ ಆರ್ಥರ್

ಭಾರತ ಮತ್ತು ಪಾಕ್​ ನಡುವಣ ಪಂದ್ಯವನ್ನು ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ ಆರ್ಥರ್ ಈ ಆಟವು ದ್ವಿಪಕ್ಷೀಯ ಸರಣಿಯಂತಿತ್ತು. ಇದು ಐಸಿಸಿಯ ಟೂರ್ನಿಯಂತಿರಲಿಲ್ಲ ಎಂದು ಟೀಕೆ ಮಾಡಿದ್ದರು. ಈ ಮೂಲಕ ಐಸಿಸಿ ಹಾಗೂ ಆತಿಥೇಯ ಭಾರತಕ್ಕೆ ಅವಮಾನ ಮಾಡಲು ಯತ್ನಿಸಿದ್ದರು.

ರಿಜ್ವಾನ್​ ವಿರುದ್ಧವೂ ದೂರು

ಅಕ್ಟೋಬರ್ 6ರಂದು ಹೈದರಾಬಾದ್​ನಲ್ಲಿ ನಡೆದ ಪಾಕಿಸ್ತಾನ (Pakistan Cricket Team) ಮತ್ತು ನೆದರ್ಲೆಡ್ಸ್​​ ನಡುವಿನ ಪಂದ್ಯದ ವೇಳೆ ಮೊಹಮ್ಮದ್ ರಿಜ್ವಾನ್ ಅವರು ಮೈದಾನದಲ್ಲೇ ನಮಾಜ್ ಮಾಡಿ ತೊಂದರೆ ಎದುರಿಸುವಂತಾಗಿದೆ. ಪಾಕಿಸ್ತಾನದ ವಿಕೆಟ್ ಕೀಪರ್ ವಿರುದ್ಧ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ದೂರು ನೀಡಿದ್ದಾರೆ. ಧಾರ್ಮಿಕ ಆಚರಣೆಗಳ ಮೂಲಕ ರಿಜ್ವಾನ್ ಕ್ರೀಡಾ ಮನೋಭಾವಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಜಿಂದಾಲ್ ತಮ್ಮ ದೂರಿನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ Ind vs Pak : ಭಾರತವನ್ನು ಟೀಕಿಸಿದ್ದ ಪಾಕಿಸ್ತಾನ ಕ್ರಿಕೆಟ್​ ನಿರ್ದೇಶಕನ ವಿರುದ್ಧ ಐಸಿಸಿ ಕ್ರಮ?

ಡಿಜಿಟಲ್​ ವೀಕ್ಷಣೆಯಲ್ಲಿ ದಾಖಲೆ

ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ಡಿಸ್ನಿ ಹಾಟ್‌ ಸ್ಟಾರ್​ನಲ್ಲಿ 3.5 ಕೋಟಿ ಮಂದಿ ವೀಕ್ಷಿಸಿ ಸಾರ್ವಕಾಲಿ ದಾಖಲೆ ಬರೆದಿತ್ತು. ಒಂದೊಮ್ಮೆ ಉಭಯ ತಂಡಗಳು ಸೆಮಿಫೈನಲ್​ನಲ್ಲಿ ಅಥವಾ ಫೈನಲ್​ನಲ್ಲಿ ಮುಖಾಮುಖಿಯಾದರೆ ಈ ಸಂಖ್ಯೆ ದುಪಟ್ಟಾದರೂ ಅಚ್ಚರಿ ಇಲ್ಲ. ಈ ಹಿಂದೆ ಡಿಜಿಟಲ್​ ಮಾಧ್ಯಮದ ಮೂಲಕ ಕ್ರಿಕೆಟ್​ ಪಂದ್ಯವೊಂದನ್ನು ಅತ್ಯಧಿಕ ಮಂದಿ ವೀಕ್ಷಣೆ ಮಾಡಿದ ದಾಖಲೆ ಈ ಬಾರಿಯ ಐಪಿಎಲ್​ ಫೈನಲ್​ ಪಂದ್ಯದ ಹೆಸರಿನಲ್ಲಿತ್ತು. ಚೆನ್ನೈ ಸೂಪರ್​ ಕಿಂಗ್ಸ್‌ ಮತ್ತು ಗುಜರಾತ್‌ ಟೈಟನ್ಸ್‌ ನಡುವೆ ಅಮಹದಾಬಾದ್​ನಲ್ಲೇ ನಡೆದಿದ್ದ ಪ್ರಶಸ್ತಿ ಕಾಳಗವನ್ನು ಜಿಯೋ ಸಿನಿಮಾದಲ್ಲಿ 3.2 ಕೋಟಿ ಮಂದಿ ವೀಕ್ಷಿಸಿದ್ದರು.

Exit mobile version