ಲಾಹೋರ್: ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಮತ್ತು ಯುವ ವೇಗಿ ನಸೀಮ್ ಶಾ(Naseem Shah) ಅವರು ಗಾಯದಿಂದ ವಿಶ್ವಕಪ್ ಟೂರ್ನಿಯಿಂದ(ICC World Cup) ಬಹುತೇಕ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಪಾಕ್ ನಾಯಕ ಬಾಬರ್ ಅಜಂ(Babar Azam) ತಿಳಿಸಿದ್ದಾರೆ.
ಲಂಕಾ ವಿರುದ್ಧ ಗುರುವಾ ನಡೆದ ಸೂಪರ್-4 ಪಂದ್ಯದ ಸೋಲಿನ ಬಳಿಕ ಮಾತನಾಡಿದ ಬಾಬರ್ ಅಜಂ, ಗಾಯಗೊಂಡ ನಸೀಮ್ ಶಾ ಇನ್ನು ಚೇತರಿಕೆ ಕಂಡಿಲ್ಲ. ಅವರ ಗಾಯದ ಸ್ವರೂಪ ಸದ್ಯ ಗಂಭಿರವಾಗಿದೆ. ಹೀಗಾಗಿ ಅವರು ವಿಶ್ವಕಪ್ ಆಡುವುದು ಅನುಮಾನ ಎಂದು ಹೇಳಿದ್ದಾರೆ. ಆದರೆ ಮತೋರ್ವ ಆಟಗಾರ ಹ್ಯಾರಿಸ್ ರವೂಫ್(Haris Rauf) ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಹೇಳಿದರು.
ಸೋಮವಾರ ನಡೆದಿದ್ದ ಭಾರತ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ನಡೆಸುವ ವೇಳೆ ನಸೀಮ್ ಶಾ ಭುಜದ ನೋವಿಗೆ ತುತ್ತಾಗಿದ್ದರು. ಬಳಿಕ ಅವರು ಮೈದಾನ ತೊರೆದು ಪಂದ್ಯವನ್ನು ಆಡಿರಲಿಲ್ಲ. ಅಲ್ಲದೆ ಏಷ್ಯಾಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದರು. ಇದೀಗ ವಿಶ್ವಕಪ್ಗೂ ಅನುಮಾನ ಎನ್ನಲಾಗಿದೆ. ಅವರ ಅಲಭ್ಯತೆ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಲಿದೆ.
ಇದನ್ನೂ ಓದಿ ICC World Cup: ವಿಶ್ವಕಪ್ಗೆ ಅಂಪೈರ್ಗಳ ನೇಮಕ; ನಿತಿನ್ ಮೆನನ್ಗೆ ಅವಕಾಶ
ನಸೀಮ್ ಶಾ ಇನ್ಸ್ವಿಂಗ್ ಮತ್ತು ಔಟ್ ಸ್ವಿಂಗ್ ಮೂಲಕ ಬ್ಯಾಟರ್ಗಳಿಗೆ ಕಾಡುತ್ತಿದ್ದರು. ಅದರಲ್ಲೂ ಭಾರತ ವಿರುದ್ಧ ರೋಹಿತ್ ಶರ್ಮ ಅವರಿಗೆ ಮೇಡನ್ ಓವರ್ ಎಸೆದು ಮಿಂಚಿದ್ದರು. 20 ವರ್ಷದ ನಸೀಮ್ ಶಾ ಪಾಕಿಸ್ತಾನ ಪರ 14 ಏಕದಿನ ಪಂದ್ಯವನ್ನು ಆಡಿ 32 ವಿಕೆಟ್ ಪಡೆದಿದ್ದಾರೆ. 33 ಕ್ಕೆ 5 ವಿಕೆಟ್ ಪಡೆದದ್ದು ಗರಿಷ್ಠ ಸಾಧನೆಯಾಗಿದೆ. 19 ಟಿ20 ಪಂದ್ಯ ಆಡಿ 15 ವಿಕೆಟ್ ಪಡೆದಿದ್ದಾರೆ.
ವಿಶ್ವ ಕಪ್ ಟೂರ್ನಿ
ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭವಾಗಿ ನವೆಂಬರ್ 19ರ ತನಕ ಸಾಗಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಕೂಡ ಇದೇ ಸ್ಟೇಡಿಯಂನಲ್ಲಿ ಏರ್ಪಡಲಿದೆ.
ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾತರದಿಂದ ಕಾದು ಕುಳಿತಿದ್ದಾರೆ.