Site icon Vistara News

Haris Rauf: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ರೌಫ್​ಗೆ ಬೆಂಬಲ ಸೂಚಿಸಿದ ರಿಜ್ವಾನ್

Haris Rauf

Haris Rauf: Mohammad Rizwan slammed for bringing India in Haris Rauf video statement

ಫ್ಲೋರಿಡಾ: ಭಾರತೀಯನೆಂದು ಪಾಕಿಸ್ತಾನದ ಅಭಿಮಾನಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ಪಾಕ್​ ವೇಗಿ ಹ್ಯಾರಿಸ್ ರೌಫ್(Haris Rauf)​ ವಿರುದ್ಧ ಭಾರೀ ಟಿಕೆ ವ್ಯಕ್ತವಾಗುತ್ತಿದ್ದರೂ ಕೂಡ ಸಹ ಆಟಗಾರ ಮೊಹಮ್ಮದ್​ ರಿಜ್ವಾನ್​(Mohammad Rizwan) ಅವರು ಬೆಂಬಲ ಸೂಚಿಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ರೌಫ್​ ಅವರನ್ನು ಸಮರ್ಥಿಸಿಕೊಂಡಿರುವ ರಿಜ್ವಾನ್​, “ರೌಫ್ ಅವರನ್ನು ಅಗೌರವಿಸಿದ ವ್ಯಕ್ತಿ ಪಾಕಿಸ್ತಾನದವನೋ ಅಥವಾ ಭಾರತದವನೋ ಎಂಬುದು ಅಪ್ರಸ್ತುತವಾಗಿದೆ. ಈ ವ್ಯಕ್ತಿಗೆ ಮೌಲ್ಯಗಳು ಮತ್ತು ನಡವಳಿಕೆಯ ಕೊರತೆಯಿದೆ. ಯಾವುದೇ ವ್ಯಕ್ತಿಯನ್ನು ವಿಶೇಷವಾಗಿ ಅವರ ಕುಟುಂಬದ ಸದಸ್ಯರ ಮುಂದೆ ಅಗೌರವಿಸುವ ಹಕ್ಕು ಯಾರಿಗೂ ಇಲ್ಲ. ಸಹನೆ, ಗೌರವ ಮತ್ತು ಸಹಾನುಭೂತಿಯಂತಹ ಮೌಲ್ಯಗಳು ಇರಬೇಕು” ಎಂದು ಹೇಳುವ ಮೂಲಕ ರೌಫ್ ಅವರ ಪರ ಬ್ಯಾಟ್​ ಬೀಸಿದ್ದಾರೆ. ರಿಜ್ವಾನ್​ ಮಾತ್ರವಲ್ಲದೆ ಪಾಕಿಸ್ತಾನ ಕೆಲ ಆಟಗಾರರು ಕೂಡ ರೌಫ್​ ಬೆಂಬಲಕ್ಕೆ ನಿಂತಿದ್ದಾರೆ.


ಏನಿದು ಘಟನೆ?


ಈಗಾಗಲೇ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ತಂಡದ ಆಟಗಾರರು ಫ್ಲೋರಿಡಾದಲ್ಲಿ ಕೆಲ ದಿನಗಳ ಕಾಲ ಎಂಜಾಯ್​ ಮಾಡಲಿದ್ದಾರೆ. ಹ್ಯಾರಿಸ್ ರೌಫ್ ಕೂಡ ತಮ್ಮ ಪತ್ನಿ ಜತೆ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಕಾಲ ಕಳೆಯುತ್ತಿದ್ದಾರೆ. ಆದರೆ, ಮಂಗಳವಾರದಂದು ಹ್ಯಾರಿಸ್ ರೌಫ್(Haris Rauf) ಅವರು ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲು ಮುಂದಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video)​ ಆಗಿತ್ತು.

ರೌಫ್​ ಅವರು ಪತ್ನಿ ಜತೆ ತಾವು ತಂಗಿದ್ದ ಹೋಟೆಲ್​ಗೆ ಹೋಗುತ್ತಿದ್ದಾಗ ವೇಳೆ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದ. ಈ ವೇಳೆ ರೌಫ್​, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದರು. ಇದಕ್ಕೆ ಸಿಟ್ಟಿನಿಂದ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಏನೋ ಕೆಟ್ಟ ಪದಗಳಿಂದ ನಿಂದಿಸಿದ್ದರು. ಇದು ರೌಫ್​ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ಇದನ್ನೂ ಓದಿ IND vs AFG: ಈ ಬಾರಿಯಾದರೂ ಭಾರತದ ಪಾಲಿಗೆ ಲಕ್ಕಿಯಾಗಲಿ ವಿಂಡೀಸ್​ ನೆಲ; ಹಿಂದಿನ 2 ವಿಶ್ವಕಪ್​ನಲ್ಲಿ ಏನಾಗಿತ್ತು?

ಅಭಿಮಾನಿಯ ಮಾತಿನಿಂದ ಸಿಟ್ಟುಗೊಂಡ ರೌಫ್​ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಪತ್ನಿ ರೌಫ್​ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಪಟ್ಟರೂ ಕೂಡ ರೌಫ್​ ತಪ್ಪಿಸಿಕೊಂಡು ಹಲ್ಲೆಗೆ ಮುಂದಾದರು. ತಕ್ಷಣ ರೌಫ್​ ಅವರ ಮ್ಯಾನೇಜರ್​ ಹಾಗು ಕೆಲ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಪತ್ನಿ ಕೂಡ ಅವರ ಕೈಗಳನ್ನು ಹಿಡಿದು ಹಲ್ಲೆ ಮಾಡದಂತೆ ಮನವಿ ಮಾಡುತ್ತಲೇ ಅವರನ್ನು ಸಮಾಧಾನ ಪಡೆಸಿದ್ದರು. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿತ್ತು.

ಪಾಕ್​ ತಂಡದ ವಿರುದ್ಧ ದೇಶದ್ರೋಹದ ಕೇಸ್‌


ನಿರಾಸದಾಯಕ ಪ್ರದರ್ಶನ ತೋರಿರುವ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶದ್ರೋಹ ಕೇಸ್‌ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂನ್​ 21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್‌ ತಂಡದ ಕಳಪೆ ಪ್ರದರ್ಶನದಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

Exit mobile version