ಮುಂಬಯಿ: ಟೈಮ್(TIME Magazine’s) ನಿಯತಕಾಲಿಕ ಬಿಡುಗಡೆ ಮಾಡಿದ ಜಗತ್ತಿನ ಅಗ್ರ 100ರ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್(Harmanpreet Kaur) ಕೌರ್ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಈ ಪಟ್ಟಿಯಲ್ಲಿ ಮೂವರು ಭಾರತೀಯ ಕಾಣಿಸಿಕೊಂಡಿದ್ದಾರೆ. ಕ್ಷಯರೋಗದಿಂದ ಬದುಕುಳಿದ ನಂದಿತಾ ವೆಂಕಟೇಶನ್(Nandita Venkatesan) ಮತ್ತು ವಾಸ್ತುಶಿಲ್ಪಿ ವಿನು ಡೇನಿಯಲ್(Vinu Daniel) ಪಟ್ಟಿಯಲ್ಲಿ ಕಾಣಿಸಿಕೊಂಡ ಭಾರತೀಯರು.
‘2023 TIME100 Next ಎಮರ್ಜಿಂಗ್ ಲೀಡರ್ಸ್ ಶೇಪಿಂಗ್ ದಿ ವರ್ಲ್ಡ್’ ಪಟ್ಟಿಯಲ್ಲಿ ಹರ್ಮನ್‌ಪ್ರೀತ್ ಕೌರ್, ನಂದಿತಾ ವೆಂಕಟೇಶನ್ ಮತ್ತು ವಿನು ಡೇನಿಯಲ್ ಅವರು ಸ್ಥಾನ ಪಡೆದಿದ್ದಾರೆ. ಇವರ ಜತೆಗೆ ಭಾರತೀಯ ಮೂಲದ ನಬರುನ್ ದಾಸ್‌ಗುಪ್ತಾ ಅವರು ಸಹ ಕಾಣಿಸಿಕೊಂಡಿದ್ದಾರೆ. ಮಹಿಳಾ ಕ್ರಿಕೆಟ್ನಲ್ಲಿ ಅಮೋಘ ಸಾಧನೆ ತೋರಿದ ಹಿನ್ನಲೆ ಕೌರ್ ಅವರನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಟೈಮ್ ಮ್ಯಾಗಜೀನ್ ಹೇಳಿದೆ.
ಇದನ್ನೂ ಓದಿ Team India : ಹರ್ಮನ್ ಪ್ರೀತ್ ಕೌರ್ ಗೆ ಮುಂದಿನ ಎರಡು ಪಂದ್ಯಗಳಿಂದ ನಿಷೇಧ
34ರ ಹರೆಯದ ಹರ್ಮನ್‌ಪ್ರೀತ್ ಕೌರ್ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ, ಆಟಗಾರ್ತಿಯಾಗಿ ತಂಡದ ಇತರ ಆಟಗಾರ್ತಿಯರಲ್ಲಿ ವಿಶ್ವಾಸ ತುಂಬುದರಲ್ಲಿ ಎತ್ತಿದ ಕೈ. 2017ರಲ್ಲಿ ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕೇವಲ 115 ಎಸೆತ ಎದುರಿಸಿ ಅಜೇಯ 171 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಅವರ ಅಸಾಧಾರಣ ಪ್ರತಿಭೆಗೆ ಪ್ರೇಕ್ಷಕರು ಫಿದಾ ಆಗಿದ್ದರು ಎಂದು ಟೈಮ್ ಮ್ಯಾಗಜೀನ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಸ್ಡನ್ ಗೌರವ ಪಡೆದಿದ್ದ ಕೌರ್
ಹರ್ಮನ್‌ಪ್ರೀತ್ ಕೌರ್ ಅವರಿಗೆ ಇದೇ ವರ್ಷ ಪ್ರತಿಷ್ಠಿತ ವಿಸ್ಡನ್ ಪ್ರಶಸ್ತಿ(wisden awards 2023) ಒಲಿದಿತ್ತು. ವರ್ಷದ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಹರ್ಮನ್‌ಪ್ರೀತ್ ಕೌರ್ ಪಾತ್ರರಾಗಿದ್ದರು. ಅವರ ನಾಯಕತ್ವದಲ್ಲಿ ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ಸರಣಿಯಲ್ಲಿ ಭಾರತ 3-0 ಅಂತರದಿಂದ ಸರಣಿ ಗೆದ್ದುಕೊಂಡಿತ್ತು. 1999ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಪರಿಚಯವಾದ ನಂತರ 2022 ರಲ್ಲಿ ಭಾರತದ ಮಹಿಳಾ ತಂಡ ಕೌರ್ ಅವರ ನಾಯಕತ್ವದಲ್ಲೇ ಬೆಳ್ಳಿ ಪದಕ ಗೆದ್ದುಕೊಂಡಿತ್ತು. 2022ರಲ್ಲಿ ಕೌರ್ ಏಕದಿನದಲ್ಲಿ 754 ರನ್ ಗಳಿಸಿ ಸಾಧನೆ ಜತೆಗೆ ಇಂಗ್ಲೆಂಡ್ ವಿರುದ್ಧ ಅಜೇಯ 143 ರನ್ ಬಾರಿಸಿದ್ದರು. ಟಿ20ಯಲ್ಲಿ ಇವರು 524ರನ್ ಗಳಿಸಿದ ಸಾಧನೆ ಮಾಡಿದ್ದರು. ವಿಸ್ಡನ್ ಪ್ರಶಸ್ತಿ ಬಳಿಕ ಇದೀಗ ಟೈಮ್ ನಿಯತಕಾಲಿಕದಲ್ಲಿಯೂ ಸ್ಥಾನ ಪಡೆದು ತಮ್ಮ ಹೆಸರಿಗೆ ಮತ್ತೊಂದು ಹಿರಿಮೆಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತ ತಂಡದ ಪರ ಅಮೋಘ ಸಾಧನೆ
ಕೌರ್ ಭಾರತ ಪರ 127 ಏಕದಿನ ಪಂದ್ಯಗಳನ್ನು ಆಡಿ ಸದ್ಯ 3393 ರನ್ ಬಾರಿಸಿದ್ದಾರೆ. ಇದರಲ್ಲಿ 5 ಶತಕ ಮತ್ತು 18 ಅರ್ಧಶತಕ ಒಳಗೊಂಡಿದೆ. 154 ಟಿ20 ಪಂದ್ಯಗಳಿಂದ 3152 ರನ್ ಗಳಿಸಿದ್ದಾರೆ. ಒಂದು ಶತಕ ಕೂಡ ಬಾರಿಸಿದ್ದಾರೆ. ಸದ್ಯ ಅವರು ಇದೇ ತಿಂಗಳು ಚೀನಾದಲ್ಲಿ ನಡೆಯುವ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಅವರ ನಾಯಕತ್ವದಲ್ಲೇ ತಂಡ ಚೊಚ್ಚಲ ಬಾರಿಗೆ ಈ ಕೂಟದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.