ನವ ದೆಹಲಿ: ಬಾಂಗ್ಲಾದೇಶ ವಿರುದ್ಧದ ಐಸಿಸಿ ಮಹಿಳಾ ಚಾಂಪಿಯನ್ ಶಿಪ್ ಸರಣಿಯ ಮೂರನೇ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತ ತಂಡದ (Team India) ನಾಯಕಿ ಹರ್ಮನ್ ಪ್ರೀತ್ ಕೌರ್ ಅವರನ್ನು ಮುಂದಿನ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಮಾನತುಗೊಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಆದೇಶ ಹೊರಡಿಸಿದೆ.
ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗಾಗಿ ರಚಿಸಿರುವ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ಅನ್ನು ಉಲ್ಲಂಘಿಸಿದ್ದಕ್ಕಾಗಿ ಕೌರ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿತ್ತು. ಲೆವೆಲ್ 2 ಅಪರಾಧಕ್ಕಾಗಿ ಅವರ ಶಿಸ್ತು ದಾಖಲೆಗೆ ಮೂರು ಡಿಮೆರಿಟ್ ಅಂಕಗಳನ್ನು ಕೂಡ ನೀಡಲಾಗಿದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಟೀಕೆಗೆ ಸಂಬಂಧಿಸಿದ ಆರ್ಟಿಕಲ್ 2.7 ಅನ್ನು ಉಲ್ಲಂಘಿಸಿದ್ದಕ್ಕಾಗಿ ಕೌರ್ ಅವರಿಗೆ ಲೆವೆಲ್ 1 ಅಪರಾಧಕ್ಕಾಗಿ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ.
ಭಾರತದ ತಂಡದ ಇನಿಂಗ್ಸ್ನ 34ನೇ ಓವರ್ನಲ್ಲಿ ಕೌರ್ ತಮ್ಮ ಬ್ಯಾಟ್ನಿಂದ ಸ್ಟಂಪ್ಗಳಿಗೆ ಹೊಡೆದಾಗ ಮೊದಲ ತಪ್ಪು ನಡೆಯಿತು, ಸ್ಪಿನ್ನರ್ ನಹೀದಾ ಅಕ್ಟರ್ ಅವರು ತಮ್ಮನ್ನು ಎಲ್ಬಿಡಬ್ಲ್ಯು ಔಟ್ ಮಾಡಿದಾಗ ಕೌರ್ ತಮ್ಮ ಬ್ಯಾಟ್ನಿಂದ ವಿಕೆಟ್ ಮೇಲೆ ಬಡಿದಿದ್ದರು. ಪಂದ್ಯದ ಬಳಿಕ ಕೌರ್ ಪಂದ್ಯದಲ್ಲಿ ಅಂಪೈರಿಂಗ್ ಅನ್ನು ಟೀಕಿಸಿದ್ದು ಎರಡನೇ ತಪ್ಪಾಗಿದೆ.
ಹರ್ಮನ್ಪ್ರೀತ್ ಕೌರ್ ಅವರು ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಐಸಿಸಿ ಇಂಟರ್ನ್ಯಾಷನಲ್ ಪ್ಯಾನಲ್ ಆಫ್ ಮ್ಯಾಚ್ ರೆಫರಿ ಅಖ್ತರ್ ಅಹ್ಮದ್ ಪ್ರಸ್ತಾಪಿಸಿದ ನಿರ್ಬಂಧಗಳನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಔಪಚಾರಿಕ ವಿಚಾರಣೆ ನಡೆಸಲಾಗಿಲ್ಲ.
ಹರ್ಮನ್ ವಿರುದ್ಧ ಆನ್ಫೀಲ್ಡ್ ಅಂಪೈರ್ ಗಳಾದ ತನ್ವೀರ್ ಅಹ್ಮದ್ ಮತ್ತು ಮುಹಮ್ಮದ್ ಕಮ್ರುಝಮಾನ್ ಮೂರನೇ ಅಂಪೈರ್ ಮೊನಿರುಝಮ್ಮನ್ ಮತ್ತು ನಾಲ್ಕನೇ ಅಂಪೈರ್ ಅಲಿ ಅರ್ಮಾನ್ ರೆಫರಿಗೆ ವಿವರ ಸಲ್ಲಿಸಿದ್ದರು.
ಲೆವೆಲ್ 2 ಉಲ್ಲಂಘನೆಗೆ ಪಂದ್ಯದ ಶುಲ್ಕದ ಶೇಕಡಾ 50ರಿಂದ 100ರಷ್ಟು ದಂಡ ಮತ್ತು ಮೂರು ಅಥವಾ ನಾಲ್ಕು ಡಿಮೆರಿಟ್ ಅಂಕಗಳನ್ನು ವಿಧಿಸಲಾಗುತ್ತದೆ. ಲೆವೆಲ್ 1 ಉಲ್ಲಂಘನೆಗೆ ಕನಿಷ್ಠ ದಂಡ ವಿಧಿಸಲಾಗುತ್ತದೆ. ಪಂದ್ಯದ ಶುಲ್ಕದ ಗರಿಷ್ಠ 50 ಪ್ರತಿಶತ ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ವಿಧಿಸಲಾಗುತ್ತದೆ.
ಇದನ್ನೂ ಓದಿ: MS Dhoni : ಧೋನಿಯ ಹಳೆಯ ಜಾಬ್ ಆಫರ್ ಲೆಟರ್ ವೈರಲ್; ಸಂಬಳ ನೋಡಿ ಅಭಿಮಾನಿಗಳಿಗೆ ಅಚ್ಚರಿ!
ಕೌರ್ ಅವರಿಗೆ ವಿಧಿಸಲಾಗಿರುವ ನಾಲ್ಕು ಡಿಮೆರಿಟ್ ಅಂಕಗಳು ಎರಡು ಅಮಾನತು ಅಂಕಗಳಾಗಿ ಪರಿವರ್ತನೆಗೊಳ್ಳುತ್ತವೆ. ಎರಡು ಅಮಾನತು ಅಂಕಗಳು ಒಂದು ಟೆಸ್ಟ್ ಅಥವಾ ಎರಡು ಏಕದಿನ ಅಥವಾ ಎರಡು ಟಿ20 ಪಂದ್ಯಗಳಿಂದ ನಿಷೇಧಕ್ಕೆ ಸಮನಾಗಿರುವುದರಿಂದ ಅವರು ಮುಂದಿನ ಎರಡು ಪಂದ್ಯಗಳಿಂದ ಅವರು ಅಮಾನತುಗೊಂಡಿದ್ದಾರೆ.