ಕೇಪ್ಟೌನ್ (ದಕ್ಷಿಣ ಆಫ್ರಿಕಾ) : ಭಾರತ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವ ಕಪ್ ಪಂದ್ಯದಲ್ಲಿ ಎರಡೆರಡು ದಾಖಲೆ ಬರೆದಿದ್ದಾರೆ. 2ನೇ ಗುಂಪಿನಲ್ಲಿರುವ ಭಾರತ ತಂಡ ಲೀಗ್ ಹಂತದ ಕೊನೇ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡುತ್ತಿದ್ದು ಈ ವೇಳೆ ಅವರು ಡಬಲ್ ರೆಕಾರ್ಡ್ ಮಾಡಿದ್ದಾರೆ. ಹರ್ಮನ್ಪ್ರೀತ್ ಕೌರ್ಗೆ ಇದು 150ನೇ ಟಿ20 ಪಂದ್ಯವಾಗಿದ್ದು ಈ ಮೂಲಕ ಗರಿಷ್ಠ ಪಂದ್ಯವಾಡಿದ ವಿಶ್ವದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ ಅವರು 13 ರನ್ ಬಾರಿಸಿದ್ದು ಇದೇ ವೇಳೆ ಅವರು 3000 ರನ್ಗಳ ಗಡಿ ದಾಟಿದರು.
ಹರ್ಮನ್ಪ್ರೀತ್ ಕೌರ್ ಈಗ ಟಿ20 ಮಾದರಿಯಲ್ಲಿ 3000 ರನ್ ಕಲೆಹಾಕಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ವಿಶ್ವದ ಮಹಿಳಾ ಕ್ರಿಕೆಟಿಗರ ಸಾಲಿನಲ್ಲಿ ಅವರಿಗೆ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವಿದೆ.
ಇದನ್ನೂ ಓದಿ : ICC Women’s T20 World Cup : ರೋಹಿತ್ ದಾಖಲೆ ಮುರಿದ ಹರ್ಮನ್ಪ್ರೀತ್ ಕೌರ್ ವಿಶ್ವದಾಖಲೆಯೂ ಬರೆದರು; ಏನದು ಸಾಧನೆ?
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 155 ರನ್ ಬಾರಿಸಿದೆ. ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ (87) ಏಕಾಂಗಿ ಹೋರಾಟ ನಡೆಸುವ ಮೂಲಕ ಭಾರತ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 24 ರನ್ ಬಾರಿಸಿದ್ದಾರೆ.