ನವ ದೆಹಲಿ: ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಭಾರತ ಸ್ಟಾರ್ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಸೆಪ್ಟೆಂಬರ್ 23ರಂದು ಚೀನಾದ ಹ್ಯಾಂಗ್ ಝೌನಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್ 2023ರ (Asia Games 2023) ಉದ್ಘಾಟನಾ ಸಮಾರಂಭದಲ್ಲಿ ತ್ರಿವರ್ಣ ಧ್ವಜಧಾರಿಗಳಾಗಿದ್ದಾರೆ. 19ನೇ ಆವೃತ್ತಿಯ ಪಂದ್ಯಾವಳಿಯಲ್ಲಿ 600ಕ್ಕೂ ಹೆಚ್ಚು ಭಾರತೀಯ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಕ್ರಿಕೆಟ್ ತಂಡಗಳು ಪಾದಾರ್ಪಣೆ ಮಾಡುತ್ತಿವೆ. ಈ ನಿಯೋಗವನ್ನು ಈ ಇಬ್ಬರು ಸ್ಟಾರ್ ಅಥ್ಲೀಟ್ಗಳು ಮುನ್ನಡೆಸಲಿದ್ದಾರೆ.
ಹ್ಯಾಂಗ್ಝೌ ಗೇಮ್ಸ್ ನ ಸ್ಪರ್ಧೆಗಳು ಸೆಪ್ಟೆಂಬರ್ 19ರಂದು ಪ್ರಾರಂಭವಾಗಿದೆ. ಆದರೆ ಪದಕಗಳ ಸ್ಪರ್ಧೆಗಳು ಉದ್ಘಾಟನಾ ಸಮಾರಂಭದ ಒಂದು ದಿನದ ನಂತರ ಸೆಪ್ಟೆಂಬರ್ 24 ರಂದು ಪ್ರಾರಂಭವಾಗಲಿವೆ. ಸಾಮಾನ್ಯವಾಗಿ ಪ್ರತಿ ರಾಷ್ಟ್ರವು ಭಾಗವಹಿಸುವವರನ್ನು ಮುನ್ನಡೆಸಲು ಕೇವಲ ಒಬ್ಬ ಕ್ರೀಡಾಪಟುವಿಗೆ ಅವಕಾಶ ನೀಡುತ್ತದೆ. ಆದರೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) 655 ಕ್ರೀಡಾಪಟುಗಳನ್ನು ಮುನ್ನಡೆಸಲು ಹರ್ಮನ್ಪ್ರೀತ್ ಸಿಂಗ್ ಮತ್ತು ಲವ್ಲಿನಾ ಬೊರ್ಗೊಹೈನ್ ಇಬ್ಬರನ್ನೂ ಆಯ್ಕೆ ಮಾಡಲು ನಿರ್ಧರಿಸಿದೆ.
ಟೋಕಿಯೊದಲ್ಲಿ ನಡೆದ 2020 ರ ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಭಾರತವನ್ನು ಕಂಚಿನ ಪದಕಕ್ಕೆ ಮುನ್ನಡೆಸಿದ್ದರು. ಲವ್ಲಿನಾ 2020ರ ಆವೃತ್ತಿಯಲ್ಲಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಜಕಾರ್ತಾದಲ್ಲಿ ನಡೆದ 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಧ್ವಜಧಾರಿಯಾಗಿದ್ದರು. ಈ ವರ್ಷ ಭಾರತದ ಖಾತೆಗೆ ಚಿನ್ನದ ಪದಕವನ್ನು ಸೇರಿಸುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ ಅವರು.
ಸೆಪ್ಟೆಂಬರ್ 23 ರಂದು ಹ್ಯಾಂಗ್ಝೌನಲ್ಲಿ ಭಾರತೀಯ ಧ್ವಜವನ್ನು ಹೊತ್ತ ಇಬ್ಬರು ಕ್ರೀಡಾಪಟುಗಳನ್ನು ಹೆಸರಿಸುವ ಐಒಎ ನಿರ್ಧಾರವನ್ನು ಭಾರತೀಯ ಚೆಫ್ ಡಿ ಮಿಷನ್ ಭೂಪೇಂದರ್ ಸಿಂಗ್ ಬಜ್ವಾ ದೃಢಪಡಿಸಿದ್ದಾರೆ.
ನಾವು ಇಂದು ಗಂಭೀರ ಚರ್ಚೆಯ ನಂತರ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಭೂಪೇಂದರ್ ಸಿಂಗ್ ಬಜ್ವಾ ಬುಧವಾರ ತಿಳಿಸಿದ್ದಾರೆ. ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಹಾಕಿ ತಂಡದ ನಾಯಕಿ ಹರ್ಮನ್ ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Asian Games 2023: ಏಷ್ಯನ್ ಗೇಮ್ಸ್ ಕ್ರಿಕೆಟ್ಗೆ ಪರಿಷ್ಕೃತ ಭಾರತ ತಂಡ ಪ್ರಕಟಿಸಿದ ಬಿಸಿಸಿಐ
ಭಾರತ ಹಾಕಿ ತಂಡ ಮಂಗಳವಾರ ಹ್ಯಾಂಗ್ ಝೌಗೆ ತಲುಪಿದೆ. ಸೆಪ್ಟೆಂಬರ್ 24ರಂದು ಉಜ್ಬೇಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಭಾರತ ಪುರುಷರ ತಂಡ ಸೆಪ್ಟೆಂಬರ್ 30ರಂದು ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದು, ಪೂಲ್ ಎ ಪಂದ್ಯಗಳಲ್ಲಿ ಜಪಾನ್, ಬಾಂಗ್ಲಾದೇಶ ಮತ್ತು ಸಿಂಗಾಪುರವನ್ನು ಎದುರಿಸಲಿದೆ. 2018ರ ಆವೃತ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ಹರ್ಮನ್ಪ್ರೀತ್ ನೇತೃತ್ವದ ತಂಡ ಯಾವುದೇ ತೊಂದರೆಯಿಲ್ಲದೆ ಫೈನಲ್ ತಲುಪುವ ವಿಶ್ವಾಸದಲ್ಲಿದೆ.