Site icon Vistara News

ಡೆಂಗ್ಯೂ ಗೆದ್ದು ಮತ್ತೆ ಮೈಕ್​ ಹಿಡಿಯಲು ಸಿದ್ಧರಾದ ಕಂಚಿನ ಕಂಠದ ಹರ್ಷ ಭೋಗ್ಲೆ

harsha bhogle

ಬೆಂಗಳೂರು: ಡೆಂಗ್ಯೂ ಜ್ವರದಿಂದ ಚೇತರಿಕೆ ಕಂಡಿರುವ ಪ್ರಸಿದ್ಧ ಕ್ರಿಕೆಟ್ ಕಾಮೆಂಟೇಟರ್ ​ಹರ್ಷ ಭೋಗ್ಲೆ(Harsha Bhogle) ಅವರು ಮತ್ತೆ ವಿಶ್ವಕಪ್​ ಟೂರ್ನಿಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಅವರು ಚೇತರಿಕೆ ಕಂಡು ಕಾಮೆಂಟರಿ ಪ್ಯಾನಲ್​ಗೆ ಮರಳಿದ ವಿಚಾರವನ್ನು ಟೀಮ್​ ಇಂಡಿಯಾದ ಹಿರಿಯ ಆಟಗಾರ ದಿನೇಶ್​ ಕಾರ್ತಿಕ್(Dinesh Karthik)​ ಅವರು ತಮ್ಮ ಇನ್​ಸ್ಟಾಗ್ರಾಮ್(instagram)​ ಖಾತೆಯಲ್ಲಿ ವಿಡಿಯೊ ಮೂಲಕ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್ ಕಾಮೆಂಟರಿಯಲ್ಲಿ ಹರ್ಷ ಭೋಗ್ಲೆ ಚಿರಪರಿಚಿತ ಹೆಸರು. ಕಂಚಿನ ಕಂಠದ ಮೂಲಕ ವಿಶ್ಲೇಷಣೆ ಮಾಡುವ ಚಾಕಚಕ್ಯತೆ, ಭಾಷೆಯ ಮೇಲಿನ ಹಿಡಿತ ಅತ್ಯದ್ಭುತ. ಇವರ ಧ್ವನಿಯನ್ನು ಹೈವೋಲ್ಟೇಜ್​ ಪಂದ್ಯಗಳಲ್ಲಿ ಕೇಳುವುದೇ ಒಂದು ಸೌಭಾಗ್ಯ ಎಂದರೂ ತಪ್ಪಾಗಲಾರದು. ಆದರೆ ಅವರಿಗೆ ವಿಶ್ವಕಪ್​ ಟೂರ್ನಿ ಆರಂಭದ ಸಮಯದಲ್ಲಿ ಡೆಂಗ್ಯೂ ಜ್ವರ ಕಾಣಿಸಿದ ಪರಿಣಾಮ ಅವರು ಹಲವು ಪಂದ್ಯಗಳಿಂದ ಹೊರಗುಳಿದಿದ್ದರು. ಈಗ ಚೇತರಿಕೆ ಕಂಡು ಮತ್ತೆ ಮೈಕ್​ ಹಿಡಿಯಲು ಸಜ್ಜಾಗಿದ್ದಾರೆ.

19ನೇ ವಯಸ್ಸಿನಲ್ಲೇ ಕ್ರಿಕೆಟ್ ಕಾಮೆಂಟರಿ

ಮೂಲತಃ ಹೈದರಾಬಾದ್ ನವರಾದ ಹರ್ಷ ಭೋಗ್ಲೆ ತನ್ನ 19ನೇ ವಯಸ್ಸಿನಲ್ಲೇ ಕ್ರಿಕೆಟ್ ಕಾಮೆಂಟರಿ ಆರಂಭಿಸಿದ್ದರು. ಅಂದು ಆಲ್ ಇಂಡಿಯಾ ರೇಡಿಯೋದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಹರ್ಷ ಆ ಬಳಿಕ ಟಿವಿ ವೀಕ್ಷಕ ವಿವರಣೆಯಲ್ಲಿ ದೊಡ್ಡ ಹೆಸರು ಮಾಡಿದರು. ಆಸ್ಟ್ರೇಲಿಯನ್ ಕ್ರಿಕೆಟ್ ಬ್ರಾಡ್ ಕಾಸ್ಟಿಂಗ್ ನಿಂದ ಕರೆ ಪಡೆದ ಮೊದಲ ಭಾರತೀಯ ಕಾಮೆಂಟೇಟರ್ ಎನ್ನುವ ಹೆಗ್ಗಳಿಕೆಯೂ ಅವರದ್ದಾಗಿದೆ. ಹರ್ಷ ಅವರು ಉತ್ತಮ ಧ್ವನಿ, ವಿಶ್ಲೇಷಣೆ ಮಾಡುವ ರೀತಿ, ಭಾಷೆಯ ಮೇಲಿನ ಹಿಡಿತ ಎಂತವರನ್ನು ಕ್ರಿಕೆಟ್​ ಲೋಕಕ್ಕೆ ಸಳೆಯುವಂತೆ ಮಾಡುತ್ತದೆ. ಅಲ್ಲದೆ ಅವರ ಧ್ವನಿಯನ್ನು ಕೇಳುವಾಗ ಕಣ್ಣ ಮುಂದೆಯೇ ಪಂದ್ಯ ನಡೆಯುವಂತೆ ಭಾಸವಾಗುತ್ತದೆ.

ಇದನ್ನೂ ಓದಿ AUS vs NED: ದುಬಾರಿ ಮೊತ್ತ ನೀಡಿ ಅನಗತ್ಯ ದಾಖಲೆ ಬರೆದ ಬಾಸ್ ಡಿ ಲೀಡೆ

ದಿನೇಶ್​ ಕಾರ್ತಿಕ್​ ಅವರು ಹರ್ಷ ಭೋಗ್ಲೆಯೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿಡಿಯೊವನ್ನು ಹಂಚಿಕೊಂಡಿದ್ದು ಈ ವಿಡಿಯೊದಲ್ಲಿ ಡೆಂಗ್ಯೂ ಜ್ವರದ ಅನುಭವನ್ನು ಕೇಳಿದ್ದಾರೆ. ಇದಕ್ಕೆ ತಮಾಷೆಯಾಗಿ ನಗುತ್ತಲೇ ಉತ್ತರಿಸಿದ ಹರ್ಷ ಭೋಗ್ಲೆ, ಸೊಳ್ಳೆ ನನ್ನ ಕಾಲನ್ನು ಸಣ್ಣದಾಗಿ ತೂತು ಮಾಡಿದೆ ಎಂದರು. ಇದಕ್ಕೆ ಕಾರ್ತಿಕ್​ ಕೋರಾಗಿ ನಕ್ಕಿದ್ದಾರೆ. ಅಲ್ಲದೆ ಮತ್ತೆ ಕಾಮೆಂಟರಿಗೆ ಮರಳಿದ ಅವರಿಗೆ ಸ್ವಾಗತಿಸಿದ್ದಾರೆ.

ಭಾರತ-ಪಾಕ್​ ಪಂದ್ಯ ಮಿಸ್​ ಆಗಿದ್ದಕ್ಕೆ ಬೇಸರಗೊಂಡಿದ್ದ ಹರ್ಷ

62 ವರ್ಷದ ಹರ್ಷ ಭೋಗ್ಲೆ ಅವರು ತಮಗೆ ಡೆಂಗ್ಯೂ ಭಾದಿಸಿದ ವೇಳೆ ಟ್ವೀಟರ್​ನಲ್ಲಿ ತಮ್ಮ ಅಲಭ್ಯತೆಯನ್ನು ತಿಳಿಸಿದ್ದರು. ಅಲ್ಲದೆ ಅಕ್ಟೋಬರ್ 14ರಂದು ನಡೆದ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಾಮೆಂಟ್ರಿ ಮಾಡಲು ಸಾಧ್ಯವಾಗದೇ ಇರುವುದು ನಿಜಕ್ಕೂ ಬೇಸರ ತಂದಿದೆ. ಅಲ್ಲದೆ ನಿರಾಸೆಯೂ ಮೂಡಿದೆ. ನನಗೆ ಡೆಂಗ್ಯೂ ಜ್ವರ ಭಾದಿಸಿದ್ದು ದೀರ್ಘ ಕಾಲ ಕಾಮೆಂಟ್ರಿ ನಡೆಸಲು ಅಸಾಧ್ಯ ಆದರೆ ಪಂದ್ಯವನ್ನು ಮನೆಯಲ್ಲೇ ಕೂತು ಆನಂದಿಸುವೆ” ಎಂದಿದ್ದರು.

ಇದನ್ನೂ ಓದಿ Odi Cricket History: ಏಕದಿನ ಕ್ರಿಕೆಟ್​ನಲ್ಲಿ ಗೆಲುವಿನ ದಾಖಲೆ ಬರೆದ ಆಸ್ಟ್ರೇಲಿಯಾ

“ನನ್ನ ಸಹೋದ್ಯೋಗಿಗಳು ಮತ್ತು ಪ್ರಸಾರ ಸಿಬ್ಬಂದಿಗಳು ನನ್ನ ಆರೋಗ್ಯ ಚೇತರಿಕೆಗೆ ಹಾರೈಸಿದ್ದಾರೆ. ಅವರಿಗೆ ಅವರಿಗೆ ವೈಯಕ್ತಿಕವಾಗಿ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ” ಎಂದು ಹರ್ಷ ಭೋಗ್ಲೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು. ಇದೀಗ ಮತ್ತೆ ಕ್ರಿಕೆಟ್ ಕಾಮೆಂಟ್ರಿಗೆ ಮರಳಿದ್ದು ಇಂದು ನಡೆಯುವ ಲಂಕಾ ಮತ್ತು ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕಾಮೆಂಟ್ರಿ ಮಾಡಲಿದ್ದಾರೆ.

Exit mobile version