ನಾರ್ತಾಂಪ್ಟನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ನಿಯೋಗದಲ್ಲಿ ಬೌಲರ್‌ಗಳ ಕಾರುಬಾರು ಜೋರಾಗಿದೆ. ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರಿತ್ ಬುಮ್ರಾ ಮಿಂಚಿದ್ದರೆ, practice match ಆರ್‌ಸಿಬಿ ಆಟಗಾರ ಹರ್ಷಲ್ ಪಟೇಲ್ ಅವರ ಆಡುಂಬೊಲವಾಗಿತ್ತು.
ಭಾನುವಾರ ನಡೆದ ನಾರ್ತಾಂಪ್ಟನ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ೧೦ ರನ್‌ಗಳಿಂದ ಜಯ ಗಳಿಸಿದೆ. ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ೩೬ ಎಸೆತಗಳಲ್ಲಿ ೫೪ ರನ್ ಬಾರಿಸಿದ್ದರೆ, ಬೌಲಿಂಗ್‌ನಲ್ಲಿ ೨೩ ರನ್‌ಗಳಿಗೆ ೨ ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.
ಕೌಂಟಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ದಿನೇಶ್ ಕಾರ್ತಿಕ್ ನೇತೃತ್ವದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೪೯ ರನ್ ಬಾರಿಸಿದರೆ, ಆತಿಥೇಯ ತಂಡ ೧೯.೩ ಓವರ್‌ಗಳಲ್ಲಿ ೧೩೯ ರನ್‌ಗಳಿಗೆ ಆಲ್‌ಔಟ್ ಆಯಿತು.
ಬ್ಯಾಟಿಂಗ್ ವೈಫಲ್ಯ
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಆರಂಭಿಕರಾದ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟಾದರೆ, ಇಶಾನ್ ಕಿಶನ್ ೧೬ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ರಾಹುಲ್ ತ್ರಿಪಾಠಿ ೭ ರನ್‌ಗಳಿಗೆ ಔಟಾದರೆ ಸೂರ್ಯಕುಮಾರ್ ಅವರೂ ಸೊನ್ನೆಗೆ ಔಟಾಗಿ ಪೆವಿಲಿಯನ್ ಕಡೆಗೆ ಸಾಗಿದರು. ಹೀಗಾಗಿ ೭೨ ರನ್‌ಗಳಿಗೆ ೫ ವಿಕೆಟ್ ನಷ್ಟಮಾಡಿಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು.ಈ ವೇಳೇ ಹುಬ್ಬೇರಿಸುವಂತೆ ಬ್ಯಾಟ್ ಮಾಡಿದ ಹರ್ಷಲ್ ಸ್ಫೋಟಕ ೫೪ ರನ್ ಬಾರಿಸಿದರೆ ದಿನೇಶ್ ಕಾರ್ತಿಕ್ ೩೪ ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ ಕೊಡುಗೆ ೨೦ ರನ್.
ಗುರಿ ಬೆನ್ನಟ್ಟಿದ ನಾರ್ತಾಂಪ್ಟನ್‌ಶೈರ್ ತಂಡವೂ ಆರಂಭದಿಂದಲೇ ವಿಕೆಟ್ ಕಳೆಕೊಳ್ಳುತ್ತಾ ಹೋಯಿತು. ಎಮಿಲಿಯೊ ಗೇ ೨೨ ಹಾಗೂ ಸೈಫ್ ಜೈಬ್ ೩೩ ರನ್ ಗಳಿಸಿ ತಂಡವನ್ನು ಕಾಪಾಡಲು ಯತ್ನಿಸಿದರೂ ಭಾರತದ ಬೌಲರ್‌ಗಳು ಅದಕ್ಕೆ ಅವಕಾಶ ಕೊಡಲಿಲ್ಲ. ನಿರಂತರವಾಗಿ ವಿಕೆಟ್ ಕಳೆದುಕೊಂಡು ೧೩೯ ರನ್‌ಗಳಿಗೆ ಸರ್ವಪತನ ಕಂಡಿತು.
ಸ್ಕೋರ್ ವಿವರ
ಭಾರತ: ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೪೯ (ಹರ್ಷಲ್ ಪಟೇಲ್ ೫೪, ದಿನೇಶ್ ಕಾರ್ತಿಕ್ ೩೪, ವೆಂಕಟೇಶ್ ಅಯ್ಯರ್ ೨೦, ಬ್ರೆಂಡನ್ ಗ್ಲೋವರ್ ೩೩ಕ್ಕೆ ೩, ನಥಾನ್ ಬಕ್ ೧೭ಕ್ಕೆ೨, ಫ್ರೆಡ್ಡಿ ಹೆಲ್ಡ್ರಿಚ್ ೩೩ಕ್ಕೆ೨).
ನಾರ್ತಾಂಪ್ಟನ್‌ಶೈರ್: ೧೯.೩ ಓವರ್‌ಗಳಲ್ಲಿ ೧೩೯ (ಸೈಫ್ ಜೈಬ್ ೩೩, ಎಮಿಲಿಯೊ ಗೇ ೨೨, ನಥಾನ್ ಬಕ್ ೧೮; ಅರ್ಶ್‌ದೀಪ್ ಸಿಂಗ್ ೨೯ಕ್ಕೆ ೨, ಆವೇಶ್ ಖಾನ್ ೧೬ಕ್ಕೆ೨, ಹರ್ಷಲ್ ಪಟೇಲ್ ೨೩ಕ್ಕೆ೨, ಯಜ್ವೇಂದ್ರ ಚಹಲ್ ೨೫ಕ್ಕೆ೨).
ಇದನ್ನೂ ಓದಿ: Practice match : ದೀಪಕ್ ಹೂಡಾ ಸ್ಫೋಟಕ ಬ್ಯಾಟಿಂಗ್, ಭಾರತಕ್ಕೆ ಜಯ