ನವ ದೆಹಲಿ : ಟಿ೨೦ ವಿಶ್ವ ಕಪ್‌ಗೆ ತಂಡ (Team India) ಪ್ರಕಟಿಸಲು ಸಜ್ಜಾಗಿರುವ ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿ ನಿರಾಳವಾಗಿದ್ದು, ವೇಗದ ಬೌಲರ್‌ಗಳಾದ ಜಸ್‌ಪ್ರಿತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.
ಮುಂದಿನ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ೨೦ ವಿಶ್ವ ಕಪ್ ನಡೆಯಲಿದೆ. ಬಹುತೇಕ ರಾಷ್ಟ್ರಗಳು ಐಸಿಸಿ ಟೂರ್ನಿಗೆ ತಂಡ ಪ್ರಕಟಿಸಿದ್ದ ಹೊರತಾಗಿಯೂ ಬಿಸಿಸಿಐ ಇನ್ನೂ ತಂಡ ಘೋಷಣೆ ಮಾಡಿಲ್ಲ. ಪ್ರಮುಖ ಬೌಲರ್‌ಗಳಾದ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಅವರ ಫಿಟ್ನೆಸ್ ಪರೀಕ್ಷೆಯ ವರದಿ ಕೈ ಸೇರದ ಕಾರಣ ತಂಡ ಪ್ರಕಟಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಕ್ರಿಕ್‌ಬಜ್ ವರದಿ ಪ್ರಕಾರ ಇಬ್ಬರೂ ಆಟಗಾರರು ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸಾಗಿದ್ದು, ಆ ವರದಿ ಆಯ್ಕೆಗಾರರ ಕೈ ಸೇರಿದೆ ಎನ್ನಲಾಗಿದೆ. ಜಸ್‌ಪ್ರಿತ್ ಬುಮ್ರಾ ಕಳೆದ ಜುಲೈನಲ್ಲಿ ಗಾಯಗೊಂಡಿದ್ದರೆ, ಹರ್ಷಲ್ ಪಟೇಲ್ ಅವರು ಬಲ ಪಾರ್ಶ್ವದ ನೋವಿನ ಕಾರಣಕ್ಕೆ ತಂಡದಿಂದ ಹೊರಗುಳಿದಿದ್ದರು. ಹೀಗಾಗಿ ಅವರು ಏಷ್ಯಾ ಕಪ್ ತಂಡಕ್ಕೆ ಅಯ್ಕೆಯಾಗಿರಲಿಲ್ಲ. ಅದರ ಪರಿಣಾಮ ಭಾರತ ತಂಡ ಟೂರ್ನಿಯಿಂದಲೇ ಹೊರಗುಳಿಯುವಂತಾಗಿತ್ತು.
ಇದೀಗ ಅವರಿಬ್ಬರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಬೌಲಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಸಮರ್ಥರಾಗಿದ್ದರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | T20 World Cup | ತಂಡ ರಚನೆಗೆ ಮೊದಲು ಬುಮ್ರಾ, ಹರ್ಷಲ್ ಫಿಟ್ನೆಸ್ ಟೆಸ್ಟ್ ವರದಿಗೆ ಕಾಯುತ್ತಿದೆ ಬಿಸಿಸಿಐ