Site icon Vistara News

Pro Kabaddi | ಹರಿಯಾಣ ಸ್ಟೀಲರ್ಸ್ ಗೆಲುವು ಕಸಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌

pro kabaddi

ಬೆಂಗಳೂರು : ಅಧಿಕಾರಯುತ ಪ್ರದರ್ಶನ ನೀಡಿದ ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಶುಕ್ರವಾರದ (ಅಕ್ಟೋಬರ್‌ ೧೪) ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ವಿರುದ್ಧ ೪೪-೩೧ ಅಂಕಗಳ ಭರ್ಜರಿ ಗೆಲುವು ಸಾಧಿಸಿತು. ಜೈಪುರ ಪಾಲಿಗೆ ಇದು ಸತತ ಎರಡನೇ ಜಯವಾಗಿದ್ದು ಒಟ್ಟಾರೆ ೧೧ ಅಂಕಗಳನ್ನು ಪಡೆದುಕೊಂಡಿದೆ. ಈ ಹಿಂದೆ ಎರಡು ಗೆಲುವು ಸಾಧಿಸಿದ್ದ ಹರಿಯಾಣ ತಂಡಕ್ಕೆ ಮೊದಲ ಸೋಲು ಎದುರಾಯಿತು.

ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಪಿಂಕ್‌ ಪ್ಯಾಂಥರ್ಸ್‌ ಬಳಗ ಹರಿಯಾಣದ ಆಟಗಾರರ ಮೇಲೆ ಸವಾರಿ ಮಾಡಿತು. ಹೀಗಾಗಿ ಪಂದ್ಯದ ಮೊದಲಾರ್ಧ ಮುಕ್ತಾಯಗೊಂಡಾಗ ೨೦-೧೨ ಅಂಕಗಳ ಮುನ್ನಡೆ ಸಾಧಿಸಿತು. ಜೈಪುರ ತಂಡದ ರೇಡರ್‌ಗಳು ಈ ಅವಧಿಯಲ್ಲಿ ೧೩ ಅಂಕಗಳನ್ನು ಗಳಿಸಿದರು.

ದ್ವಿತೀಯಾರ್ಧದಲ್ಲಿ ಇನ್ನೂ ಪ್ರಭಾವಶಾಲಿ ಪ್ರದರ್ಶನ ನೀಡಿದ ಪಿಂಕ್ ಪ್ಯಾಂಥರ್ಸ್‌ ಬಳಗ ಸತತವಾಗಿ ಅಂಕಗಳನ್ನು ಸಂಪಾದಿಸಿತು. ಈ ಅವಧಿಯಲ್ಲಿ ಒಟ್ಟಾರೆ ೨೪ ಅಂಕಗಳನ್ನು ಗಳಿಸಿಕೊಂಡಿತು. ಈ ವೇಳೆ ಜೈಪುರ ತಂಡ ಡಿಫೆಂಡರ್‌ಗಳು ೯ ಅಂಕಗಳನ್ನು ತಂದುಕೊಟ್ಟರು.

ಪ್ಯಾಂಥರ್ಸ್ ತಂಡದ ಪರ ರೈಡರ್‌ ಅರ್ಜುನ್‌ ದೇಸ್ವಾಲ್‌ ೧೪ ಅಂಕಗಳೊಂದಿಗೆ ಸೂಪರ್‌೧೦ ಸಾಧನೆ ಮಾಡಿದರು. ಡಿಫೆಂಡರ್‌ ಸುನೀಲ್‌ ಕುಮಾರ್‌ ೮ ಅಂಕಗಳನ್ನು ತಂದುಕೊಟ್ಟರು. ಎದುರಾಳಿ ತಂಡದಲ್ಲಿ ಮೀತು ೧೬ ಅಂಕಗಳೊಂದಿಗೆ ಏಕಾಂಗಿ ಸಾಧನೆ ಮಾಡಿದರೂ ಉಳಿದವರ ಬೆಂಬಲ ದೊರಕದ ಕಾರಣ ಸೋಲಿಗೆ ಒಳಗಾಯಿತು.

Exit mobile version