ಮುಂಬಯಿ : ಭಾರತ ಹಾಗೂ ಪಾಕಿಸ್ತಾನ (INDvsPAK) ತಂಡಗಳ ನಡುವಿನ ಟಿ20 ವಿಶ್ವ ಕಪ್ ಪಂದ್ಯ ಭಾರತ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಇನ್ನೂ ಅಚ್ಚಾಗಿಯೇ ಉಳಿದಿದೆ. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಬಾರಿಸಿದ ಅಜೇಯ 82 ರನ್ಗಳು ಅವರ ಹಾಗೂ ಭಾರತ ಕ್ರಿಕೆಟ್ ಇತಿಹಾಸದ ಅವಿಸ್ಮರಣೀಯ ಇನಿಂಗ್ಸ್ಗಳಲ್ಲೊಂದು. ಅಂದಿನ ಪಂದ್ಯದ ರೋಚಕತೆ ಜಾಗತಿಕ ಕ್ರಿಕೆಟ್ ಕಾರಿಡಾರ್ನಲ್ಲಿ ಜೋರು ಸದ್ದು ಮಾಡಿತ್ತು. ಇಡಿ ವಿಶ್ವ ಕಪ್ನಲ್ಲಿ (t20 world cup) ಅಷ್ಟೊಂದು ಸುಂದರವಾದ ಪಂದ್ಯ ನಡೆದೇ ಇರಲಿಲ್ಲ ಎಂದೆಲ್ಲ ಬಣ್ಣಿಸಲಾಗಿದೆ. ಅದೇ ರೀತಿ ಇನಿಂಗ್ಸ್ನ ಕೊನೇ ಓವರ್ನಲ್ಲಿ ಭಾರತ ತಂಡ ತನಗೆ ಬೇಕಾಗಿದ್ದ 16 ರನ್ಗಳನ್ನು ಗಳಿಸಿದ ರೀತಿಯೂ ಅಪರೂಪದ್ದು. ಈ ಬಗ್ಗೆ ಹಿರಿಯ ಕ್ರಿಕೆಟಿಗರನೇಕರು ನಾನಾ ಬಗೆಯ ವಿಶ್ಲೇಷಣೆ ನೀಡಿದ್ದಾರೆ. ಅಂತೆಯೇ ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಕೂಡ ಒಂದು ವಿವರಣೆ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕ ಹಾಗೂ ಹಾಲಿ ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಆಗಿರುವ ರಿಕಿ ಪಾಂಟಿಂಗ್ ಪ್ರಕಾರ ಅಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar azam) ಸಿಕ್ಕಾಪಟ್ಟೆ ಗೊಂದಲಕ್ಕೆ ಬಿದ್ದಿದ್ದರು. ಭಾರತ ತಂಡವನ್ನು ಎದುರಿಸುವಾಗ ಅವರು ತಲ್ಲಣಿಸಿದರು. ಅದೇ ಕಾರಣಕ್ಕೆ ವೈಫಲ್ಯ ಕಂಡರು ಎಂದು ಪಾಂಟಿಂಗ್ ಹೇಳಿದ್ದಾರೆ. ಸಹ ಆಟಗಾರರರು ಅವರನ್ನು ಸಮಾಧಾನ ಮಾಡುತ್ತಿದ್ದ ಹೊರತಾಗಿಯೂ ಅವರು ದಿಕ್ಕು ತೋಚದಂತೆ ವರ್ತಿಸುತ್ತಿದ್ದರು ಎಂಬುದಾಗಿ ರಿಕಿ ಪಾಂಟಿಂಗ್ ಐಸಿಸಿ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಭಾರತ ತಂಡದಕ್ಕೆ ಕೊನೇ ಓವರ್ನಲ್ಲಿ 16 ರನ್ಗಳು ಬೇಕಾಗಿದ್ದವು. ವೇಗದ ಬೌಲರ್ಗಳ ಸ್ಪೆಲ್ಗಳು ಮುಗಿದು ಹೋಗಿದ್ದವು. ಹೀಗಾಗಿ ಮೊಹಮ್ಮದ್ ನವಾಜ್ ಕೈಗೆ ಚೆಂಡು ಕೊಡುವುದು ಅನಿವಾರ್ಯವಾಯಿತು. ಈ ವೇಳೆಯೇ ಅವರು ಹೆದರಿಕೊಂಡಿದ್ದರು. ಅದೇ ರೀತಿ ನವಾಜ್ ನೋ ಬಾಲ್ ಹಾಕಿದ ಬಳಿಕ ಅವರ ಭಯ ಇನ್ನಷ್ಟು ಹೆಚ್ಚಾಯಿತು. ಬಳಿಕದ ಚೆಂಡು ವಿಕೆಟ್ಗೆ ಬಡಿದು ಬೌಂಡರಿ ಗೆರೆಗೆ ಬಡಿಯಿತು. ಈ ವೇಳೆಯೂ ಅವರು ಅಂಪೈರ್ಗಳ ಬಳಿ ವಾದಕ್ಕೆ ನಿಂತರು. ಶಾದಬ್ ಖಾನ್ ಸೇರಿದಂತೆ ಹಲವರು ಅವರನ್ನು ಸಮಾಧಾನ ಮಾಡಲು ಮುಂದಾದರೂ ನಿಯಂತ್ರಣಕ್ಕೆ ಬಂದಿಲ್ಲ ಎಂಬುದಾಗಿ ಪಾಂಟಿಂಗ್ ಹೇಳಿದ್ದಾರೆ.
ಇದನ್ನೂ ಓದಿ : Virat Kohli: ವಿಮೆನ್ಸ್ ಪ್ರೀಮಿಯರ್ ಲೀಗ್: ತಂಡ ಖರೀದಿಗೆ ಸಂತಸ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ
ಬಾಬರ್ ಅಜಮ್ ನಾಯಕತ್ವದ ವಿಚಾರದಲ್ಲಿ ಇನ್ನಷ್ಟು ಸುಧಾರಣೆ ಕಂಡುಕೊಳ್ಳಬೇಕು ಎಂಬುದಾಗಿ ಇದೇ ವೇಳೆ ಬಾಬರ್ ಅಜಮ್ ಹೇಳಿದರು. ಅವರ ಬ್ಯಾಟಿಂಗ್ ಕೌಶಲ ಅದ್ಭುತ. ಅವರ ಆಟವನ್ನು ನೋಡುವುದು ಕೂಡ ಚಂದ. ಆದರೆ, ನಾಯಕತ್ವದ ವಿಚಾರಕ್ಕೆ ಬಂದಾಗ ಇನ್ನಷ್ಟು ತಂತ್ರಗಳನ್ನು ಕಲಿತುಕೊಳ್ಳಬೇಕು ಎಂದು ಪಾಂಟಿಂಗ್ ಹೇಳಿದ್ದಾರೆ.