Site icon Vistara News

Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

Head Coach

ಮುಂಬಯಿ: ರಾಹುಲ್​ ದ್ರಾವಿಡ್(Rahul Dravid)​ ಅವರು ಭಾರತ ಕ್ರಿಕೆಟ್​ ತಂಡದ ಮುಖ್ಯ ಹುದ್ದೆಯಲ್ಲಿ(Head Coach) ಮುಂದುವರಿಯಲು ಆಸಕ್ತಿ ತೋರದ ಕಾರಣ ಬಿಸಿಸಿಐ ಹೊಸ ಕೋಚ್​ಗಾಗಿ ಅರ್ಜಿ ಆಹ್ವಾನಿಸಿದೆ. ದ್ರಾವಿಡ್​ ಬಳಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್(VVS Laxman) ಅವರು ಮುಂದಿನ ಕೋಚ್ ಆಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಲಕ್ಷ್ಮಣ್ ಕೂಡಾ ಈ ಹುದ್ದೆಯನ್ನು ಅಲಂಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಕೆಲವು ಹಿರಿಯ ಆಟಗಾರರು ಡ್ರಾವಿಡ್​ಗೆ​ ರೆಡ್​ ಬಾಲ್​ ಟೆಸ್ಟ್ ತಂಡದ ಕೋಚ್​ ಆಗಿ ಮುಂದುವರಿಯುವಂತೆ ಮನವಿ ಮಾಡಿದ್ದರು. ಆದರೆ, ದ್ರಾವಿಡ್​ ಇದನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ದ್ರಾವಿಡ್​ ಮೊದಲ ಬಾರಿಗೆ ಭಾರತ ತಂಡ ಮುಖ್ಯ ಕೋಚ್ ಆಗಲು ನಿರಾಸಕ್ತಿ ತೋರಿದ್ದರು. ಆದರೆ ಹಲವರ ಒತ್ತಾಯದ ಮೇರೆಗೆ ಅವರು ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ಅವರು ಎರಡನೇ ಅವಧಿಗೆ ಕೋಚ್ ಆಗಿ ಮುಂದುವರಿಯಲು ಮನಸ್ಸು ಮಾಡಿಲ್ಲ. ಹೀಗಾಗಿ ಬಿಸಿಸಿಐ ವಿದೇಶಿ ಕೋಚ್​ ಬದಲು ಈ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲು ಮನಸ್ಸು ಮಾಡಿದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ IPL 2024 Points Table: ಪಂಜಾಬ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಹಲವು ಬಾರಿ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. 2022ರಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಸರಣಿಗೆ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸಿ ಯಶಸ್ಸು ಕಂಡಿದ್ದರು. ಇವರ ಮಾರ್ಗದರ್ಶನದಲ್ಲೇ ಅಂಡರ್ 19 ವಿಶ್ವ ಕಪ್ ಕೂಡ ಟೀಮ್​ ಇಂಡಿಯಾ ಗೆದ್ದಿತ್ತು. ಹೀಗಾಗಿ ದ್ರಾವಿಡ್​ ಬಳಿಕ ಟೀಮ್​ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಸೂಕ್ತ ಎಂದು ಬಿಸಿಸಿಐ ನಿರ್ಧರಿಸಿತ್ತು. ಇದೀಗ ಲಕ್ಷ್ಮಣ್ ಕೋಚಿಂಗ್​ ಬಗ್ಗೆ ಆಸಕ್ತಿ ಹೊಂದಿಲ್ಲ, ಅವರು ಅರ್ಜಿ ಸಲ್ಲಿಸಲು ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ.

ಸ್ಪೋರ್ಟ್‌ಸ್ಟಾರ್‌ನ ವರದಿಯ ಪ್ರಕಾರ, ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ರಾಹುಲ್ ದ್ರಾವಿಡ್, ವೈಯಕ್ತಿಕ ಕಾರಣಗಳಿಗಾಗಿ ಇನ್ನು ಮುಂದೆ ಕೋಚ್​ ಹುದ್ದೆಯಲ್ಲಿ ಮತ್ತೊಂದು ವಿಸ್ತರಣೆಯನ್ನು ಬಯಸುವುದಿಲ್ಲ ಎಂದು ಮಂಡಳಿಗೆ ಮೊದಲೇ ತಿಳಿಸಿದ್ದರು. ಆದರೆ ಟಿ20 ವಿಶ್ವಕಪ್​ ತನಕ ತಂಡಕ್ಕೆ ಮಾರ್ಗದರ್ಶನ ಮಾಡುವಂತೆ ಬಿಸಿಸಿಐ ಒತ್ತಾಯಿಸಿದ ಕಾರಣ ದ್ರಾವಿಡ್​ ತಮ್ಮ ಕೋಚಿಂಗ್​ ಅವಧಿಯನ್ನು ಟಿ20 ವಿಶ್ವಕಪ್​ ತನ ಮುಂದುವರಿಸಿದರು. ಇದೀಗ ಟಿ20 ಮುಗಿದ ತಕ್ಷಣ ಅವರು ಈ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇದೇ ಕಾರಣಕ್ಕೆ ಬಿಸಿಸಿಐ ನೂತನ ಕೋಚ್​ ಹುಡುಕಾಟದಲ್ಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿದೆ.

Exit mobile version