ಬೆಂಗಳೂರು : ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯನ್ನು ಭಾರತ ತಂಡ ಗೆದ್ದಿದ್ದೆ. ಮೂರು ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ಏತನ್ಮಧ್ಯೆ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಅನಾರೋಗ್ಯ ಉಂಟಾಗಿದ್ದು, ಮೂರನೇ ಪಂದ್ಯ ಆಯೋಜನೆಗೊಂಡಿರುವ ತಿರುವನಂತಪುರಕ್ಕೆ ಹೋಗದೇ ಬೆಂಗಳೂರಿಗೆ ವಾಪಸಾಗಿದ್ದಾರೆ.
ರಾಹುಲ್ ದ್ರಾವಿಡ್ ಅವರು ಬೆಂಗಳೂರಿಗೆ ಬರುವ ವಿಮಾನದಲ್ಲಿ ಕುಳಿತಿರುವ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಅವರು ಬೆಂಗಳೂರಿಗೆ ವಾಪಸಾಗಿದ್ದಾರೆ ಎಂದು ಹೇಳಲಾಗಿದೆ. ದ್ರಾವಿಡ್ ಅವರಿಗೆ ರಕ್ತದೊತ್ತಡ ಸಮಸ್ಯೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಾಳ್ ಕ್ರಿಕೆಟ್ ಅಸೋಸಿಯೇಶನ್ ವೈದ್ಯಕೀಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಅವರನ್ನು ಹೊರತುಪಡಿಸಿ ಟೀಮ್ ಇಂಡಿಯಾದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಬೆಂಗಳೂರಿನಿಂದ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿಗೆ ಬಂದಿರುವ ರಾಹುಲ್ ದ್ರಾವಿಡ್ ತಮ್ಮ ಫ್ಯಾಮಿಲಿ ಡಾಕ್ಟರ್ ಮೂಲಕ ಚಿಕಿತ್ಸೆ ಪಡೆಯಲಿದ್ದಾರೆ.
ದ್ರಾವಿಡ್ ಅವರ ಆರೋಗ್ಯದಲ್ಲಿ ದೊಡ್ಡ ಮಟ್ಟದ ಏರುಪೇರು ಆಗಿಲ್ಲ. ಅವರು ಚೆನ್ನಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ಸೂಚನೆಯ ಮೇರೆಗೆ ವಿಶ್ರಾಂತಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | INDvsSL ODI | ಲಂಕಾ ವಿರುದ್ಧ ಗೆಲುವಿನೊಂದಿಗೆ ನೂತನ ದಾಖಲೆ ಬರೆದ ಭಾರತ ತಂಡ, ಏನದು ರೆಕಾರ್ಡ್?