ಢಾಕಾ: ಇತ್ತೀಚೆಗೆ ಸಣ್ಣ ಸಣ್ಣ ವಯಸ್ಸಿನ ಯುವಕರೇ ಹೃದಯಾಘಾತಕ್ಕೀಡಾಗಿ (Heart Attack) ಕ್ಷಣ ಮಾತ್ರದಲ್ಲಿ ಜೀವ ಕಳೆದುಕೊಳ್ಳುವ ವಿದ್ಯಮಾನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ, ಆಟ ಆಡುವಾಗ ಒಮ್ಮೆಲೇ ಹೃದಯ ನಿಂತು ಬಿಡುವುದು ಹೆಚ್ಚಾಗುತ್ತಲೇ ಇದೆ. ಯುವ ಜನರೇ ಇದಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಹೌದು, ಬಾಂಗ್ಲಾದೇಶದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಜಿಯಾವುರ್ ರೆಹಮಾನ್(Grandmaster Ziaur Rahman) ಚೆಸ್ ಆಡುತ್ತಿರುವಾಗಲೇ ದಿಢೀರ್ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ರಾಷ್ಟ್ರೀಯ ಚಾಂಪಿಯನ್‌ಶಿಪ್ 12ನೇ ಸುತ್ತಿನ ಪಂದ್ಯದಲ್ಲಿ ಆಡುತ್ತಿದ್ದ ವೇಳೆ ಜಿಯಾವುರ್ ರೆಹಮಾನ್ ಕುಸಿದು ಬಿದ್ದು ನಿಧನರಾದರು ಎಂದು ಬಾಂಗ್ಲಾದೇಶ ಚೆಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿಯಾದ ಶಹಾಬ್ ಉದ್ದೀನ್ ಶಮಿಮ್ ಮಾಹಿತಿ ಹಂಚಿಕೊಂಡಿದ್ದಾರೆ.
ರೆಹಮಾನ್ ತನ್ನ ಎದುರಾಳಿ ಇನಾಮುಲ್ ಹೊಸೈನ್ ವಿರುದ್ಧ ಪಂದ್ಯವಾಡುತ್ತಿದ್ದಾಗ ದಿಢೀರ್ ಕುಸಿದುಬಿದ್ದರು. ತಕ್ಷಣವೇ ಅವರನ್ನು ಢಾಕಾದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರೊಳಗೆ ಅವರು ಸಾವನ್ನಪ್ಪಿದ್ದರು ಎಂಬುದನ್ನು ವೈದ್ಯರು ಧೃಡಪಡಿಸಿದರು ಎಂದು ಶಮಿಮ್ ಹೇಳಿದ್ದಾರೆ.
ಕಳೆದ ವಾರ ಇಂಡೋನೇಷ್ಯಾದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯೊಂದರಲ್ಲಿ ಪಂದ್ಯ ಆಡುತ್ತಿದ್ದಾಗಲೇ ಕುಸಿದುಬಿದ್ದು ಆಟಗಾರನೋರ್ವ ಮೃತಪಟ್ಟಿರುವ ದಾರುಣ ಘಟನೆ ಸಂಭಿಸಿತ್ತು. ಆಟಗಾರ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿಯೇ ಬಿದ್ದು ನರಳಾಟ ಮಾಡಿದ ವಿಡಿಯೊ ವೈರಲ್ ಆಗಿತ್ತು. 17 ವರ್ಷದ ಚೀನ ಆಟಗಾರ ಝಾಂಕ್ ಝಿಜಿಯೆ(Zhang Zhijie) ಸಾವನ್ನಪ್ಪಿದ ಆಟಗಾರ.
ಇದ್ನನೂ ಓದಿ Heart Attack: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಎಳೇ ಜೀವ ಬಲಿ; ಈ ಸಲ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ
ಜಪಾನ್ ಕಸುಮ ಕವಾನೊ ವಿರುದ್ಧ ಝಿಜಿಯೆ ವಿರುದ್ಧ ಆಡುತ್ತಿದ್ದ ಝಾಂಕ್ ಝಿಜಿಯೆ ಮೊದಲ ಗೇಮ್ನಲ್ಲಿ 1-1 ಅಂಕಗಳಿಸಿದ್ದರು. ಸರ್ವ್ ಮಾಡಿದ ತಕ್ಷಣ ಝಾಂಕ್ ಝಿಜಿಯೆ ಕೋರ್ಟ್ನಲ್ಲಿಯೇ ಕುಸಿದು ಬಿದ್ದರು. ಅವರನ್ನು ಬದುಕಿಸುವ ಪ್ರಯತ್ನ ನಡೆಯಿತಾದರೂ ಅದು ಫಲ ನೀಡಲಿಲ್ಲ. ಹೃದಯಾಘಾತದಿಂದ(Heart Attack) ಮೃತಪಟ್ಟಿದ್ದರು.
ಕೆಲ ತಿಂಗಳ ಹಿಂದೆ ಪಾಕಿಸ್ತಾನದ(Pakistani tennis player Zainab Ali Naqvi) ಯುವ ಟೆನಿಸ್ ಆಟಗಾರ್ತಿ ಝೈನಾಬ್ ಅಲಿ ನಖ್ವಿ(Zainab Ali Naqvi) ಅಭ್ಯಾಸ ಮಾಡುವಾಗ ಕುಸಿದು ಸಾವನ್ನಪ್ಪಿದ್ದರು. 17 ವರ್ಷದ ಆಟಗಾರ್ತಿಗೆ ಹೃದಯಾಘಾತ(Heart Attack) ಸಂಭವಿಸಿತ್ತು. ಐಟಿಎಫ್ ಜೂನಿಯರ್ ಟೂರ್ನಿಯಲ್ಲಿ(ITF junior tournament) ಆಡಲು ಅವರು ಸಿದ್ಧತೆ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಅಭ್ಯಾಸ ನಡೆಸಿ ತಮ್ಮ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅವರು ಸಾವಿಗೀಡಾಗಿದ್ದರು. ಪ್ರಜ್ಞಾಹೀನರಾದ ಝೈನಾಬ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.