ಮುಂಬೈ: ಶನಿವಾರ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(England vs South Africa) ವಿರುದ್ಧ ಹಾಲಿ ಚಾಂಪಿಯನ್ ಇಂಗ್ಲೆಂಡ್ 229 ರನ್ಗಳ ಹೀನಾಯ ಸೋಲು ಸೋಲು ಕಂಡಿದೆ. ಈ ಸೋಲಿನ ಕಾರಣ ಜಾಸ್ ಬಟ್ಲರ್ ಬಳಗದ ಹಾದಿ ದುರ್ಗಮಗೊಂಡಿದೆ. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್(Heinrich Klaasen) ಅವರು ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಕ್ರೀಸ್ಗಿಳಿದ ಆರಂಭದಲ್ಲೇ ಸಿಕ್ಸರ್ ಬೌಂಡರಿಗಳ ಮಳೆಯನ್ನೇ ಸುರಿಸಿದ ಹೆನ್ರಿಚ್ ಕ್ಲಾಸೆನ್ ಕೇವಲ 61 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ 67 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 109 ರನ್ ಗಳಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಶತಕದ ಜತೆಗೆ ದಾಖಲೆಯೊಂದನ್ನು ಕೂಡ ತಮ್ಮ ಹೆಸರಿಗೆ ಬರೆದರು. ವಿಶ್ವಕಪ್ನಲ್ಲಿ ಅತಿ ಕಡಿಮೆ ಎಸೆತಗಳಿಂದ ಶತಕ ಬಾರಿಸಿದ 6ನೇ ಬ್ಯಾಟರ್ ಎನಿಸಿಕೊಂಡರು. ದಕ್ಷಿಣ ಆಫ್ರಿಕಾ ಪರ ಈ ಸಾಧನೆ ಮಾಡಿದ ಮೂರನೇ ಆಟಗಾರನಾಗಿದ್ದಾರೆ.
ಇದೇ ತಂಡದ ಐಡೆನ್ ಮಾರ್ಕ್ರಮ್ ಅವರು ವಿಶ್ವಕಪ್ನಲ್ಲಿ ಅತಿ ಕಡಿಮೆ ಎಸೆತದಲ್ಲಿ ಶತಕ ಬಾರಿಸಿದ ಸಾಧಕರ ಪಟ್ಟಿಯ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಮಾರ್ಕ್ರಮ್ ಅವರು ಕೂಡ ಇದೇ ಆವೃತ್ತಿಯ ವಿಶ್ವಕಪ್ನಲ್ಲಿ ಈ ದಾಖಲೆ ಬರೆದಿದ್ದಾರೆ. ಶ್ರೀಲಂಕಾ ವಿರುದ್ಧ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮಾರ್ಕ್ರಮ್ 49 ಎಸೆತಗಳಲ್ಲಿ ಶತಕ ಬಾರಿಸಿದ್ದರು.
ಇದನ್ನೂ ಓದಿ IND vs NZ: ಇಂಡೋ-ಕಿವೀಸ್ ಪಂದ್ಯಕ್ಕೂ ಮುನ್ನ ಧೋನಿ ರನೌಟ್ ನೆನಪಿಸಿದ ಐಸಿಸಿ
ದ್ವಿತೀಯ ಸ್ಥಾನದಲ್ಲಿ ಐರ್ಲೆಂಡ್ ತಂಡದ ಕೆವಿನ್ ಒಬ್ರಿಯನ್ ಕಾಣಿಸಿಕೊಂಡಿದ್ದಾರೆ. ಅವರು 2011ರಲ್ಲಿ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ (51 ಎಸೆತಗಳು) ಕಾಣಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ (52 ಎಸೆತಗಳು) ಹಾಗೂ ಇಂಗ್ಲೆಂಡ್‌ನ ಐಯಾನ್ ಮಾರ್ಗನ್ (57 ಎಸೆತಗಳು) ಅವರು ಈ ಸಾಧಕರ ಪಟ್ಟಿಯಲ್ಲಿ ಕ್ರಮವಾಗಿ 4 ಹಾಗೂ 5ನೇ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಹೀನಾಯ ಸೋಲು ಕಂಡ ಇಂಗ್ಲೆಂಡ್
400 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾದ ಘಾತಕ ಬೌಲಿಂಗ್ ದಾಳಿಗೆ ನಲುಗಿ ಪೆವಿಲಿಯನ್ ಪರೇಡ್ ನಡೆಸಿದರು. 22 ಓವರ್ಗಳಲ್ಲಿ 170 ರನ್ ಗಳಿಸಿ 229 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು.
ದಕ್ಷಿಣ ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ (85) ಹಾಗೂ ವ್ಯಾನ್ ಡೆರ್ ಡಸ್ಸೆನ್ (60) ಎರಡನೇ ವಿಕೆಟ್ಗೆ 121 ರನ್ಗಳ ಜತೆಯಾಟವಾಡಿದರು. ನಾಯಕ ಏಡೆನ್ ಮಾರ್ಕ್ರಮ್ (42) ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು. ಆರನೇ ವಿಕೆಟ್ಗೆ ಜತೆಯಾದ ಹೆನ್ರಿಚ್ ಕ್ಲಾಸೆನ್ (109 ರನ್) ಹಾಗೂ ಮಾರ್ಕೊ ಜೆನ್ಸನ್ (ಅಜೇಯ 75 ರನ್) 151 ರನ್ಗಳ ಜತೆಯಾಟವಾಡಿದರು.