ಮುಂಬಯಿ : ಭಾರತ (Team India) ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ೨೦ ಸರಣಿಯ ಬುಧವಾರ (ಸೆಪ್ಟೆಂಬರ್ ೨೮) ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಕ್ತಾಯಗೊಂಡ ಮೂರೇ ದಿನದಲ್ಲಿ ಈ ಸರಣಿ ಆರಂಭವಾಗುತ್ತಿದೆ. ಹೀಗಾಗಿ ಮುಂದಿನ ಸರಣಿಯ ಬಗ್ಗೆ ಭಾರತ ತಂಡಕ್ಕೆ ಸ್ಪಷ್ಟ ಯೋಜನೆಯಿದೆ. ಹಾಗಾದರೆ ಟೀಮ್ ಇಂಡಿಯಾಗೆ ಮುಂದಿನ ಸರಣಿಯಲ್ಲಿ ಅನುಕೂಲವಾಗಬಲ್ಲ ಮೂರು ಸಂಗತಿಗಳ ಯಾವುದೆಲ್ಲ ನೋಡೋಣ.
ಲಯ ಕಂಡುಕೊಂಡ ವಿರಾಟ್
ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿರುವುದೂ ಟೀಮ್ ಇಂಡಿಯಾದ ಪಾಲಿಗೆ ಆಶಾದಾಯಕ ಸಂಗತಿ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಅವರು ೬೩ ರನ್ ಬಾರಿಸುವುದರೊಂದಿಗೆ ಜಯದ ರೂವಾರಿ ಎನಿಸಿಕೊಂಡಿದ್ದರು. ಕೆಲವು ವಾರಗಳ ಹಿಂದೆಯಷ್ಟೇ ದುಬೈ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಟಿ೨೦ ಶತಕ ಸಿಡಿಸಿದ್ದ ವಿರಾಟ್ ಭಾನುವಾರ ೩೩ನೇ ಟಿ೨೦ ಅಂತಾರಾಷ್ಟ್ರಿಯ ಅರ್ಧ ಶತಕ ಬಾರಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಅವರು ಬ್ಯಾಟ್ ಮಾಡುತ್ತಿರುವ ವೈಖರಿ ಹಾಗೂ ಚೇಸಿಂಗ್ ವೇಳೆ ಅವರು ತಂಡಕ್ಕೆ ನೀಡುತ್ತಿರುವ ನೆರವು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಪೂರಕವಾಗಿದೆ.
ಸೂರ್ಯಕುಮಾರ್ ಅಬ್ಬರ
ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಅಬ್ಬರಿಸುತ್ತಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ವಿಶ್ವಾಸ ಮೂಡಿಸಿದೆ. ಕೊಹ್ಲಿ ಹಾಗೂ ಸೂರ್ಯಕುಮಾರ್ ಸೇರಿಕೊಂಡು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೇ ಪಂದ್ಯದಲ್ಲಿ ೧೦೩ ರನ್‌ಗಳ ಜತೆಯಾಟವಾಡಿದ್ದರು. ಅದರಲ್ಲೂ ಸೂರ್ಯಕುಮಾರ್ ಅವರ ಆಟ ದೊಡ್ಡ ರನ್ ಮೊತ್ತವನ್ನು ಚೇಸ್ ಮಾಡಲು ಪೂರಕವಾಗಿತ್ತು. ಅವರು ಅದೇ ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ಬ್ಯಾಟ್ ಬೀಸಿದರೆ ಸರಣಿ ವಶಪಡಿಸಿಕೊಳ್ಳುವುದಕ್ಕೆ ಹೆಚ್ಚು ಶ್ರಮ ಬೇಕಾಗಿಲ್ಲ.
ಅಕ್ಷರ್ ಸ್ಪಿನ್
ರವೀಂದ್ರ ಜಡೇಜಾ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕಾರಣ ಟೀಮ್ ಇಂಡಿಯಾ ಸೇವೆಗೆ ಲಭ್ಯವಿಲ್ಲ. ಹೀಗಾಗಿ ಸ್ಪಿನ್ ಬ್ಯಾಟಿಂಗ್ ಅಲ್‌ರೌಂಡರ್ ಆಗಿ ಅಕ್ಷರ್ ಪಟೇಲ್ ತಂಡ ಸೇರಿಕೊಂಡಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ೮ ವಿಕೆಟ್ ಕಬಳಿಸಿ ವಿಶ್ವಾಸ ಮೂಡಿಸಿದ್ದಾರೆ. ಅಂತೆಯೇ ನಿರ್ಣಾಯಕ ಪಂದ್ಯದಲ್ಲಿ ಜಡೇಜಾ ಅವರಂತೆಯೇ ಬೌಂಡರಿ ಲೈನ್‌ನಿಂದ ಚೆಂಡೆಸೆದು ಮ್ಯಾಕ್ಸ್‌ವೆಲ್ ಅವರನ್ನು ರನ್ ಔಟ್ ಮಾಡಿದ್ದಾರೆ. ಹೀಗಾಗಿ ಅವರು ಕೂಡ ಭಾರತ ತಂಡಕ್ಕೆ ನೆರವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಇದನ್ನೂ ಓದಿ | Team India | ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಹೊಸ ಚಿಂತೆ, ಜಸ್‌ಪ್ರಿತ್ ಬುಮ್ರಾ ಕಳಪೆ ಫಾರ್ಮ್