ಬೆಂಗಳೂರು: ಭಾರತ ಕ್ರಿಕೆಟ್ ಕ್ಷೇತ್ರದ ದೇವರು ಸಚಿನ್ ತೆಂಡೂಲ್ಕರ್ ಅವರು ಏಪ್ರಿಲ್ 24ಕ್ಕೆ 50ನೇ ವರ್ಷದ ಜನುಮದಿನ ಆಚರಿಸಿಕೊಂಡಿದ್ದಾರೆ. ಅವರ ಜನುಮದಿನದ ಶುಭ ಸಂದರ್ಭದಲ್ಲಿ ಮಾಜಿ, ಹಾಲಿ ಕ್ರಿಕೆಟಿಗರು ಹಾಗೂ ನಾನಾ ಕ್ಷೇತ್ರದ ಗಣ್ಯರು ಶುಭ ಹಾರೈಸಿದ್ದಾರೆ. ತಮ್ಮ ಜನುಮ ದಿನದ ಕುರಿತು ಮಾತನಾಡಿದ್ದ ಸಚಿನ್, ಇದು ನನ್ನ ನಿಧಾನಗತಿಯ ಅರ್ಧ ಶತಕ. ಆದರೆ, ತೃಪ್ತಿದಾಯಕ ಇನಿಂಗ್ಸ್ ಇದು ಎಂದಿದ್ದಾರೆ. ಜನುಮದಿನದ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಸಾಧನೆಗಳನ್ನು ಮೆಲುಕು ಹಾಕಲಾಗುತ್ತಿದೆ. ಅಂತಹ ಕೆಲವೊಂದು ದಾಖಲೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
34,357 ರನ್‌ಗಳು
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 34,357 ರನ್ಗಳನ್ನು ಕಲೆ ಹಾಕಿದ್ದಾರೆ. ಈ ಮೂಲಕ ಗರಿಷ್ಠ ರನ್ ಪೇರಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ದಾಎರ 664 ಅಂತಾರಾಷ್ಟ್ರೀಯ ಪಂದ್ಯಗಳಿಂದ 48.52ರ ಸರಾಸರಿ ಹಾಗೂ 67.58ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಶಿಖರವನ್ನೇ ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ 25,322 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
264 ಅರ್ಧ ಶತಕಗಳು
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 264 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇಷ್ಟೊಂದು ಅರ್ಧ ಶತಕಗಳನ್ನು ಯಾವ ಆಟಗಾರನೂ ಬಾರಿಸಿಲ್ಲ. ಸದ್ಯ ಕ್ರಿಕೆಟ್ನಲ್ಲಿರುವ ವಿರಾಟ್ ಕೊಹ್ಲಿ 205 ಅರ್ಧ ಶತಕಗಳ ಸಮೇತ ಎರಡನೇ ಸ್ಥಾನದಲ್ಲಿದ್ದಾರೆ. ಅವರಿಗೆ ಸಚಿನ್ ದಾಖಲೆ ಮುರಿಯುವ ಅವಕಾಶವಿದ್ದರೂ ಅದು ಸುಲಭವಲ್ಲ.
463 ಒಡಿಐ ಆಡಿದ ಸಾಧನೆ
ಸಚಿನ್ ತೆಂಡೂಲ್ಕರ್ ಒಟ್ಟು 463 ಏಕ ದಿನ ಪಂದ್ಯಗಳಲ್ಲಿ ಆಡಿದ್ದಾರೆ. ಇಷ್ಟೊಂದು ಪಂದ್ಯಗಳಲ್ಲಿ ಯಾರೂ ಬಾಗಿಯಾಗಿಲ್ಲ. 274 ಪಂದ್ಯವಾಡಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
200 ಟೆಸ್ಟ್ ಪಂದ್ಯಗಳು
ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾದ ವಿಶ್ವದ ಏಕೈಕ ಆಟಗಾರ. ಇಲ್ಲೂ ಅವರದ್ದೇ ಪಾರಮ್ಯ. 41 ವರ್ಷದ ಇಂಗ್ಲೆಂಡ್ ಆಟಗಾರ ಜೇಮ್ಸ್ ಆ್ಯಂಡರ್ಸನ್ 179 ಪಂದ್ಯಗಳ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : Sachin Tendulkar : ಸಚಿನ್ ತೆಂಡೂಲ್ಕರ್ ಜಾಗತಿಕ ಕ್ರಿಕೆಟ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದು ಹೇಗೆ?
100 ಶತಕಗಳು
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳ ಸಾಧನೆ ಮಾಡಿದೆ ಏಕಮೇವ ಆಟಗಾರ ಸಚಿನ್ ತೆಂಡೂಲ್ಕರ್. ವಿರಾಟ್ ಕೊಹ್ಲಿ 75 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ಅವರ ದಾಖಲೆ ಮುರಿಯಲು ವಿರಾಟ್ಗೆ ಕನಿಷ್ಠ ಐದು ವರ್ಷ ಬೇಕಾಗಬಹುದು.
200 ವಿಕೆಟ್, 30 ಸಾವಿರ ರನ್
ಸಚಿನ್ ತೆಂಡೂಲ್ಕರ್ ಅರೆಕಾಲಿಕ ಬೌಲರ್ ಆಗಿಯೂ ತಂಡಕ್ಕೆ ನೆರವಾಗುತ್ತಿದ್ದರು. 24 ವರ್ಷಗಳ ವೃತ್ತಿ ಕ್ರಿಕೆಟ್‌ನಲ್ಲಿ ಅವರು 200ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ 30 ಸಾವಿರಕ್ಕೂ ಅಧಿಕ ರನ್ ಹಾಗೂ 200ಕ್ಕೂ ಅಧಿಕ ವಿಕೆಟ್ ಪಡೆದ ಏಕೈಕ ಆಟಗಾರ ಎಂಬ ಸಾಧನೆ ತಮ್ಮದಾಗಿಸಿಕೊಂಡಿದ್ದಾರೆ.