ದುಬೈ : ಭಾರತ ಹಾಗೂ ಪಾಕಿಸ್ತಾನ (Ind vs Pak) ತಂಡಗಳ ನಡುವಿನ ಏಷ್ಯಾ ಕಪ್ ಟೂರ್ನಿಯ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಟೂರ್ನಿಯ ಹೈವೋಲ್ಟೇಜ್ ಪಂದ್ಯ ಇದಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಜಿದ್ದಾಜಿದ್ದಿನ ಹಣಾಹಣಿಯನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಇದುವರೆಗೆ ೧೪ ಬಾರಿ ಪರಸ್ಪರ ಮುಖಾಮುಖಿಯಾಗಿದೆ. ಅದರಲ್ಲಿ ಎಂಟು ಬಾರಿ ಭಾರತ ಗೆದ್ದಿದ್ದರೆ, ಐದು ಬಾರಿ ಪಾಕ್ ಗೆದ್ದಿತ್ತು. ೧೯೯೭ರ ಪಂದ್ಯದಲ್ಲಿ ಫಲಿತಾಂಶ ಪ್ರಕಟವಾಗಿರಲಿಲ್ಲ. ಈ ಪಂದ್ಯಗಳ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ…
- ಭಾರತ ಕಳೆದ ಮೂರು ಏಷ್ಯಾ ಕಪ್ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದೆ. ೨೦೧೬ರಲ್ಲಿ ಎರಡು ಪಂದ್ಯಗಳು ಹಾಗೂ ೨೦೧೮ರಲ್ಲಿ ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ.
- ಪಾಕಿಸ್ತಾನ ತಂಡ ಕೊನೇ ಬಾರಿ ಭಾರತ ವಿರುದ್ಧ ಏಷ್ಯಾ ಕಪ್ ಪಂದ್ಯದಲ್ಲಿ ಗೆದ್ದಿರುವುದು ೨೦೧೪ರಲ್ಲಿ. ಆ ಪಂದ್ಯದಲ್ಲಿ ಭಾರತ ಒಂದು ವಿಕೆಟ್ನಿಂದ ವೀರೋಚಿತ ಸೋಲು ಕಂಡಿತ್ತು.
- ೨೦೧೬ರಲ್ಲಿ ಮೀರ್ಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನ ೧೭.೩ ಓವರ್ಗಳಲ್ಲಿ ೮೩ ರನ್ಗಳಿಗೆ ಆಲ್ಔಟ್ ಆಗಿತ್ತು. ಇದು ಏಷ್ಯಾ ಕಪ್ನಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಕನಿಷ್ಠ ಮೊತ್ತವಾಗಿದೆ.
- ೨೦೧೬ರಲ್ಲಿ ಮೀರ್ಪುರದ ಪಂದ್ಯಲ್ಲಿ ಪಾಕಿಸ್ತಾನ ತಂಡ ಪೇರಿಸಿದ್ದ ೮೩ ರನ್ಗಳಿಗೆ ವಿರುದ್ಧವಾಗಿ ಆಡಿದ್ದ ಭಾರತ ತಂಡ ೧೦ ರನ್ ಮಾಡುವುದಕ್ಕಿಂತ ಮೊದಲೇ ಮೂರು ವಿಕೆಟ್ ಕಳೆದುಕೊಂಡಿತ್ತು. ಇದು ಪಾಕ್ ವಿರುದ್ಧ ಭಾರತದ ಆರಂಭಿಕ ಬ್ಯಾಟರ್ಗಳ ಕನಿಷ್ಠ ಪ್ರದರ್ಶನವಾಗಿದೆ. ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಈ ಪಂದ್ಯವನ್ನು ಗೆಲ್ಲಿಸಿದ್ದರು.
- ೨೦೧೬ರ ಮೀರ್ಪುರ ಪಂದ್ಯದಲ್ಲಿ ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಸೊನ್ನೆ ರನ್ಗೆ ಔಟಾಗಿದ್ದರು. ಪಾಕ್ ವಿರುದ್ಧ ಏಷ್ಯಾ ಕಪ್ನಲ್ಲಿ ಆರಂಭಿಕ ಇಬ್ಬರೂ ಬ್ಯಾಟ್ಸ್ಮನ್ಗಳು ಡಕ್ಔಟ್ ಆಗಿರುವುದು ಅದೇ ಮೊದಲು.
- ಏಷ್ಯಾ ಕಪ್ನಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಗರಿಷ್ಠ ಸ್ಕೋರ್ ೩೨೯ ರನ್ಗಳು (ಏಕದಿನ ಪಂದ್ಯ ೨೦೧೨ ಮೀರ್ಪುರ). ಆದರೆ, ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ ೩೩೦ ರನ್ ಬಾರಿಸಿ ಜಯ ಸಾಧಿಸಿತ್ತು.
- ಮೀರ್ಪುರದಲ್ಲಿ (೨೦೧೨) ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಬ್ಯಾಟರ್ಗಳಾದ ಮೊಹಮ್ಮದ್ ಹಫೀಜ್ (೧೦೫) ಮತ್ತು ನಾಸಿರ್ ಜೆಮ್ಶೆಡ್ (೧೧೨) ಶತಕ ಬಾರಿಸಿದ್ದರು. ಭಾರತ ವಿರುದ್ಧ ಪಾಕ್ನ ಇಬ್ಬರು ಆರಂಭಿಕರು ಶತಕ ಬಾರಿಸಿದ್ದು ಅದೇ ಮೊದಲು.
- ಏಷ್ಯಾ ಕಪ್ನಲ್ಲಿ ಚೇಸಿಂಗ್ ವೇಳೆ ಶತಕ ಬಾರಿಸಿದ ಭಾರತದ ಏಕೈಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ. ೨೦೧೨ರಲ್ಲಿ ಮೀರ್ಪುರದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ೧೮೩ ರನ್ ಬಾರಿಸಿದ್ದರೆ, ೨೦೧೪ರಲ್ಲಿ ಬಾಂಗ್ಲಾದೇಶ ವಿರುದ್ಧ ಫತುಲ್ಲಾದಲ್ಲಿ ೧೩೬ ರನ್ ಬಾರಿಸಿದ್ದರು.
- ಕೊಹ್ಲಿ ಬಾರಿಸಿದ ೧೮೩ ರನ್ಗಳು ಏಷ್ಯಾ ಕಪ್ನಲ್ಲಿ ಬ್ಯಾಟರ್ ಒಬ್ಬರ ಗರಿಷ್ಠ ವೈಯಕ್ತಿಕ ಸ್ಕೋರ್ ಎನಿಸಿಕೊಂಡಿದೆ.
- ೨೦೧೨ರ ಮೀರ್ಪುರ ಪಂದ್ಯದಲ್ಲಿ ಮೊಹಮ್ಮದ್ ಹಫೀಜ್ ಹಾಗೂ ನಾಸಿರ್ ಜೆಮ್ಶೆಡ್ ಮೊದಲ ವಿಕೆಟ್ಗೆ ೨೨೪ ರನ್ ಬಾರಿಸಿದ್ದು, ಏಷ್ಯಾ ಕಪ್ನಲ್ಲಿ ಆರಂಭಿಕ ಬ್ಯಾಟರ್ಗಳ ಗರಿಷ್ಠ ಜತೆಯಾಗಿದೆ.
- ೨೦೧೮ರ ಆವೃತ್ತಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಆರಂಭಿಕ ಬ್ಯಾಟರ್ಗಳಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಮೊದಲ ವಿಕೆಟ್ಗೆ ೨೧೦ ರನ್ ಬಾರಿಸಿದ್ದರು. ಇದು ಭಾರತ ತಂಡ ಪರ ಗರಿಷ್ಠ ಜತೆಯಾಟವಾಗಿದೆ.
- ಪಾಕಿಸ್ತಾನ ವಿರುದ್ಧ ಒಂದೇ ಇನಿಂಗ್ಸ್ನಲ್ಲಿ ಎರಡು ಶಕತಗಳನ್ನು ಬಾರಿಸಿದ ಭಾರತದ ಆಟಗಾರರೆಂದರೆ ಶಿಖರ್ ಧವನ್ (೧೧೪ ರನ್), ರೋಹಿತ್ ಶರ್ಮ (೧೧೧ ರನ್).
- ಭಾರತದ ಅರ್ಷದ್ ಅಯ್ಯುಬ್ ೧೯೯೮ರ ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ವಿರುದ್ಧ ೨೧ ರನ್ಗಳಿಗೆ ಐದು ವಿಕೆಟ್ ಪಡೆದಿದ್ದರು. ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ವಿರುದ್ದ ಭಾರತದ ಬೌಲರ್ ಒಬ್ಬರ ಅತ್ಯುತ್ತಮ ಸಾಧನೆ ಇದಾಗಿದೆ.
- ರೋಹಿತ್ ಶರ್ಮ ಒಟ್ಟು ಏಷ್ಯಾ ಕಪ್ಗಳಲ್ಲಿ ಪಾಕಿಸ್ತಾನ ವಿರುದ್ಧ ೩೬೭ ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧ ಶತಕ ಬಾರಿಸಿದ್ದಾರೆ. ಇದಕ್ಕಾಗಿ ಅವರು ಒಟ್ಟಾರೆ ಎಂಟು ಇನಿಂಗ್ಸ್ಗಳಲ್ಲಿ ಆಡಿದ್ದಾರೆ. ಇದು ಪಾಕ್ ವಿರುದ್ಧ ಏಷ್ಯಾ ಕಪ್ನಲ್ಲಿ ಭಾರತದ ಬ್ಯಾಟರ್ ಒಬ್ಬರ ಗರಿಷ್ಠ ಸಾಧನೆಯಾಗಿದೆ.
- ಪಾಕಿಸ್ತಾನದ ಅಕಿಬ್ ಜಾವೆದ್ ೧೯೯೫ರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ವಿರುದ್ಧ ೧೯ರನ್ಗಳಿಗೆ ೫ ವಿಕೆಟ್ ಕಬಳಿಸಿದ್ದರು. ಏಷ್ಯಾ ಕಪ್ನಲ್ಲಿ ಭಾರತ ವಿರುದ್ಧ ಗರಿಷ್ಠ ವಿಕೆಟ್ ಪಡೆದವರು ಅವರೊಬ್ಬರೆ.
- ಭಾರತ ಹಾಗೂ ಪಾಕಿಸ್ತಾನ ನಡುವಿನ ಎರಡು ಪಂದ್ಯಗಳಲ್ಲಿ ಒಬ್ಬನೇ ಒಬ್ಬ ಬ್ಯಾಟರ್ ಸಿಕ್ಸರ್ ಬಾರಿಸಿರಲಿಲ್ಲ. ೧೯೯೮ರ ಢಾಕಾ ಪಂದ್ಯ ಹಾಗೂ ೨೦೧೬ರ ಮೀರ್ಪುರ ಪಂದ್ಯ.
- ಭಾರತ ವಿರುದ್ಧ ಪಾಕಿಸ್ತಾನ ದಾಖಲಿಸಿದ ಗರಿಷ್ಠ ರನ್ಗಳ ಅಂತರದ ಗೆಲುವು ೧೯೯೫ರಲ್ಲಿ ದಾಖಲಾಗಿದೆ. ಆ ಪಂದ್ಯದಲ್ಲಿ ಪಾಕಿಸ್ತಾನ ೯೭ ರನ್ಗಳಿಂದ ಜಯ ಸಾಧಿಸಿತ್ತು.
ಇದನ್ನೂ ಓದಿ | IND vs PAK | ಭಾರತದಲ್ಲಿ ಎ, ಬಿ,ಸಿ ತಂಡಗಳಿವೆ, ಸೋಲಿಸುವುದು ಸುಲಭವಲ್ಲ ಎಂದ ಪಾಕ್ ಮಾಜಿ ಸ್ಪಿನ್ನರ್