ನವದೆಹಲಿ: ಏಷ್ಯನ್ ಗೇಮ್ಸ್ 2023 ರ (Asian Games 2023) ಪುರುಷರ ಟಿ 20 ಐ ಕ್ರಿಕೆಟ್ ಪಂದ್ಯಾವಳಿಯ ಮೊದಲ ಮುಖಾಮುಖಿ ನೇಪಾಳ ಮತ್ತು ಮಂಗೋಲಿಯಾ ನಡುವೆ ಬುಧವಾರ ಚೀನಾದ ಹ್ಯಾಂಗ್ಝೌನಲ್ಲಿ ಏರ್ಪಟ್ಟಿತು. ಈ ಪಂದ್ಯ ಸಂಪೂರ್ಣವಾಗಿ ಏಕಮುಖವಾಗಿ ನಡೆಯಿತು. ನೇಪಾಳ ತಂಡ ದುರ್ಬಲವಾಗಿದ್ದರೂ ಮಂಗೋಲಿಯಾ ಕ್ರಿಕೆಟ್ ಶಿಶು. ಹೀಗಾಗಿ ನೇಪಾಳ ತಂಡ ಮಂಗೋಲಿಯಾವನ್ನು ಬಹುತೇಕ ಜರ್ಜರಿತಗೊಳಿಸಿತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಮೂಲಕ ಮಿಂಚಿ ಹಲವಾರು ನೂತನ ದಾಖಲೆಗಳನ್ನು ಸೃಷ್ಟಿಸಿತು. ನೇಪಾಳ ತಂಡಕ್ಕೆ 273 ರನ್ಗಳ ದಾಖಲೆಯ ಜಯವೂ ದೊರೆಯಿತು.
Historic.
— Johns. (@CricCrazyJohns) September 27, 2023
Dipendra Singh smashed fifty from just 9 balls – fastest ever in International cricket…!!!!pic.twitter.com/2Z1GxItIDL
ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ನಂತರ ಮಂಗೋಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೊಚ್ಚಲ ಏಷ್ಯಾಕಪ್ ಅಭಿಯಾನದಲ್ಲಿ ಹೊಸದಾಗಿ ಕಣಕ್ಕಿಳಿದ ನೇಪಾಳ, ಮೊದಲ ಐದು ಓವರ್ ಗಳಲ್ಲಿ ಆರಂಭಿಕ ಆಟಗಾರರು 42 ರನ್ ಸೇರಿಸುವ ಮೂಲಕ ಉತ್ತಮ ಆರಂಭ ಪಡೆಯಿತು. ಬಳಿಕ ಕುಶಾಲ್ ಮಲ್ಲಾ ಹಾಗೂ ನಾಯಕ ರೋಹಿತ್ ಪೌಡೆಲ್ ಕೇವಲ 65 ಎಸೆತಗಳಲ್ಲಿ 193 ರನ್ಗಳ ಜೊತೆಯಾಟವಾಡಿದರು.
ಈ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳು ಇಂತಿವೆ
- ಕುಶಾಲ್ ಮಲ್ಲಾ ಕೇವಲ 34 ಎಸೆತಗಳಲ್ಲಿ ಟಿ 20 ಐ ಕ್ರಿಕೆಟ್ನಲ್ಲಿ ವೇಗವಾಗಿ ಶತಕ ಬಾರಿಸಿದರು. ಈ ಹಿಂದೆ ರೋಹಿತ್ ಶರ್ಮಾ ಮತ್ತು ಡೇವಿಡ್ ಮಿಲ್ಲರ್ ತಲಾ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. 19ರ ಹರೆಯದ ಮಲ್ಲಾ 50 ಎಸೆತಗಳಲ್ಲಿ 8 ಬೌಂಡರಿ ಹಾಗೂ 12 ಸಿಕ್ಸರ್ ಬಾರಿಸಿ ಅಜೇಯ 137 ರನ್ ಬಾರಿಸಿದ್ದರು.
- ಈ ಪಂದ್ಯದಲ್ಲಿ ನೇಪಾಳ ಮುರಿದ ಅನೇಕ ದಾಖಲೆಗಳಲ್ಲಿ ಇದು ಒಂದಾಗಿದೆ. ನಾಯಕ ರೋಹಿತ್ ಪೌಡೆಲ್ 27 ಎಸೆತಗಳಲ್ಲಿ 61 ರನ್ ಗಳಿಸಿ ಔಟಾದ ನಂತರ ಆಲ್ ರೌಂಡರ್ ದೀಪೇಂದ್ರ ಸಿಂಗ್ ಐರಿ ಬಂದರು. 23ರ ಹರೆಯದ ಆಲ್ರೌಂಡರ್ ಟಿ20 ಕ್ರಿಕೆಟ್ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸುವ ಮೂಲಕ ಕ್ರಿಕೆಟ್ ಇತಿಹಾದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ದೀಪೇಂದ್ರ ತಮ್ಮ ಅರ್ಧ ಶತಕವನ್ನು ತಲುಪಲು ಕೇವಲ ಒಂಬತ್ತು ಎಸೆತಗಳನ್ನು ತೆಗೆದುಕೊಂಡರು. 2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ಅವರ 16 ವರ್ಷಗಳ ದಾಖಲೆಯನ್ನು ಮುರಿದರು. ಯುವ ಆಟಗಾರ 10 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗಿ ಉಳಿದರು, ಮಲ್ಲಾ ಅವರೊಂದಿಗೆ 11 ಎಸೆತಗಳಲ್ಲಿ 55 ರನ್ಗಳ ಜೊತೆಯಾಟವನ್ನು ಆಡಿದರು.
- ಅಂತಿಮವಾಗಿ ನೇಪಾಳ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 314 ರನ್ ಕಲೆಹಾಕಿತು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 300ಕ್ಕೂ ಅಧಿಕ ರನ್ ಬಾರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2019ರಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ 3 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತ್ತು. ರೋಹಿತ್ ಪೌಡೆ್ ಬಳಗ ತಮ್ಮ ಇನ್ನಿಂಗ್ಸ್ ನಲ್ಲಿ 26 ಸಿಕ್ಸರ್ ಗಳನ್ನು ಬಾರಿಸಿದರು. ಇದು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಬಾರಿಸಿದ 22 ಸಿಕ್ಸರ್ಗಳ ದಾಖಲೆಯನ್ನು ಹಿಮ್ಮೆಟ್ಟಿಸಿತು. ಟಿ20 ಐ ಇನ್ನಿಂಗ್ಸ್ನಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್ಗಳ ದಾಖಲೆ ಎನಿಸಿಕೊಂಡಿತು.
- ಗುರಿ ಬೆನ್ನಟ್ಟಿದ ಮಂಗೋಲಿಯಾ 13.1 ಓವರ್ ಗಳಲ್ಲಿ ಕೇವಲ 41 ರನ್ ಗಳಿಗೆ ಆಲೌಟ್ ಆಯಿತು. 273 ರನ್ ಗಳ ಭರ್ಜರಿ ಜಯ ಸಾಧಿಸಿತು. ಇದು ಟಿ20ಐ ಕ್ರಿಕೆಟ್ನಲ್ಲಿ ರನ್ಗಳ ವಿಷಯದಲ್ಲಿ ಅತಿ ದೊಡ್ಡ ಅಂತರದ ಗೆಲುವು.