ದುಬೈ: ಟಿ೨೦ ವಿಶ್ವ ಕಪ್ ಮುಗಿದು ಇಂಗ್ಲೆಂಡ್ ತಂಡ ಕಪ್ ಎತ್ತಿದೆ. ಪಾಕಿಸ್ತಾನ ತಂಡ ಫೈನಲ್‌ನಲ್ಲಿ ಸೋತು ನಿರಾಸೆ ಎದುರಿಸಿದೆ. ಸೆಮಿ ಫೈನಲ್ ಪಂದ್ಯದಲ್ಲಿ ಸೋತಿರುವ ಭಾರತ ತಂಡದ ಅಭಿಮಾನಿಗಳಿಗೂ ಸಿಕ್ಕಾಪಟ್ಟೆ ಬೇಸರ ಉಂಟಾಗಿದೆ. ಆದರೆ, ವಿರಾಟ್ ಕೊಹ್ಲಿಯ (Virat Kohli) ಅಭಿಮಾನಿಗಳಿಗೊಂದು ಶುಭ ಸುದ್ದಿಯಿದೆ. ಈ ಬಾರಿಯ ಟಿ೨೦ ವಿಶ್ವ ಕಪ್‌ನಲ್ಲಿ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿಯ ಹೆಸರು ಅಗ್ರ ಸ್ಥಾನದಲ್ಲಿದೆ.
ಪಾಕಿಸ್ತಾನ ವಿರುದ್ಧದ ಸೂಪರ್-೧೨ ಹಂತದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ ೮೨ ರನ್ ಬಾರಿಸಿದ್ದರು. ಇದು ಹಾಲಿ ವಿಶ್ವ ಕಪ್‌ನ ಹಾಗೂ ವಿರಾಟ್ ಕೊಹ್ಲಿ ವೃತ್ತಿ ಕ್ರಿಕೆಟ್‌ನ ಅತ್ಯುತ್ತಮ ಪ್ರದರ್ಶನ. ಈ ಪ್ರದರ್ಶನವನ್ನು ಐಸಿಸಿ ನಂಬರ್ ಒನ್ ಎಂದು ಘೋಷಿಸಿದೆ.
ಸೂಪರ್ ೧೨ ಹಂತದಲ್ಲಿ ಭಾರತ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ತಂಡದ ಬೌಲರ್ ಲುಂಗಿ ಎನ್‌ಗಿಡಿ ೨೯ ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿದ್ದರು. ಅದಕ್ಕೆ ಪಟ್ಟಿಯಲ್ಲಿ ಎರಡನೇ ಸ್ಥಾನವಿದೆ.
ಪಾಕಿಸ್ತಾನ ತಂಡವನ್ನು ಜಿಂಬಾಬ್ವೆ ಬಳಗ ಸೂಪರ್-೧೨ ಹಂತದಲ್ಲಿ ಸೋಲಿಸಿತ್ತು. ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ೨೫ ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿದ್ದರು. ಇದಕ್ಕೆ ಮೂರನೇ ಸ್ಥಾನ ನೀಡಲಾಗಿದೆ. ಆಸ್ಟ್ರೇಲಿಯಾ ತಂಡದ ಮಾರ್ಕಸ್ ಸ್ಟೋಯ್ನಿಸ್ ಶ್ರೀಲಂಕಾ ವಿರುದ್ಧದ ಸೂಪರ್-೧೨ ಹಂತದ ಪಂದ್ಯದಲ್ಲಿ ೧೭ ಎಸೆತಕ್ಕೆ ೫೯* ರನ್ ಬಾರಿಸಿದ್ದರು. ಪಟ್ಟಿಯಲ್ಲಿ ಈ ಪ್ರದರ್ಶನಕ್ಕೆ ನಾಲ್ಕನೇ ಸ್ಥಾನ ಲಭಿಸಿದೆ.
ಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಗ್ಲೆನ್ ಫಿಲಿಪ್ಸ್ (೧೦೪) ಶತಕ ಬಾರಿಸಿದ್ದರು. ತಂಡದ ಒಟ್ಟು ರನ್‌ಗಳಲ್ಲಿ ಶೇಕಡ ೬೨ ಗ್ಲೆನ್ ಫಿಲಿಪ್ಸ್ ಅವರದ್ದಾಗಿದೆ. ಈ ಪ್ರದರಶನಕ್ಕೆ ಐದನೇ ಸ್ಥಾನ ನೀಡಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್ ಬೌಲರ್ ಶದಾಬ್ ಖಾನ್ ಅವರು ಬ್ಯಾಟಿಂಗ್‌ನಲ್ಲಿ ಅಜೇಯ ೫೨ ರನ್ ಬಾರಿಸುವ ಜತೆಗೆ ಬೌಲಿಂಗ್‌ನಲ್ಲಿ ೧೬ ರನ್‌ಗಳಿಗೆ ೨ ವಿಕೆಟ್ ಪಡೆದಿರುವುದು, ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ ತಂಡದ ಬೌಲರ್ ಬ್ರೆಂಡನ್ ಗ್ಲೋವರ್ ಅವರ ೯ ರನ್‌ಗಳಿಗೆ ೩ ವಿಕೆಟ್ ಪ್ರದರ್ಶನ, ಭಾರತ ತಂಡದ ವಿರುದ್ಧದ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಬಾರಿಸಿ ಅಜೇಯ ೮೬ ರನ್, ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಇಂಗ್ಲೆಂಡ್ ಬೌಲರ್ ಸ್ಯಾಮ್ ಕರನ್ ೧೨ ರನ್ ವೆಚ್ಚದಲ್ಲಿ ಮೂರು ವಿಕೆಟ್ ಪಡೆದಿರುವುದನ್ನೂ ಐಸಿಸಿ ಉತ್ತಮ ಸಾಧನೆ ಪಟ್ಟಿಗೆ ಪರಿಗಣಿಸಿದೆ.
ಇದನ್ನೂ ಓದಿ | Sania-Shoaib | ಟಾಕ್ ಶೋ ಆರಂಭಿಸಲಿರುವ ಸಾನಿಯಾ-ಮಲಿಕ್, ಡಿವೋರ್ಸ್ ಸುದ್ದಿ ಪಬ್ಲಿಸಿಟಿಗಾ?