ಮುಂಬಯಿ: ಶ್ರೀಲಂಕಾದ ದಿಗ್ಗಜ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರು ಏಪ್ರಿಲ್ 17, 2023 ರಂದು 51 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಜೀವನ ಕತೆಯಾಧಾರಿತ ಸಿನಿಮಾ 800 ನ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಎಂಎಸ್ ಶ್ರೀಪತಿ ಈ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. ಸ್ಲಮ್‌ಡಾಗ್ ಮಿಲಿಯನೇರ್ ಖ್ಯಾತಿಯ ಮಧುರ್ ಮಿತ್ತಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೂವಿ ಟ್ರೈನ್ ಮೋಷನ್ ಪಿಕ್ಚರ್ಸ್ ಮತ್ತು ವಿವೇಕ್ ರಂಗಾಚಾರ್ ಈ ಸಿನಿಮಾವನ್ನು ನಿರ್ಮಿಸಿದ್ದು, ವರ್ಷಾಂತ್ಯದಲ್ಲಿ ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಶ್ರೀಲಂಕಾದ ಕ್ಯಾಂಡಿ ಮೂಲದ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್‌ನನಲ್ಲಿ 22.86 ಸರಾಸರಿಯಲ್ಲಿ 1347 ವಿಕೆಟ್‌ಗಳನ್ನು ಉರುಳಿಸಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಲಂಕಾ ಮೂಲದ ಈ ಆಫ್‌ಸ್ಪಿನ್ನರ್ ದಾಖಲೆಯ 800 ವಿಕೆಟ್‌ಗಳನ್ನು ಪಡೆದಿರುವ ಕಾರಣ ಸಿನಿಮಾಗೆ ‘800’ ಎಂದು ಹೆಸರಿಡಲಾಗಿದೆ. ಪ್ರಮುಖವಾಗಿ ಮುರಳೀಧರನ್ ಅವರು ತಮಿಳುನಾಡು ಮೂಲದವರು. ಅವನ ಅಜ್ಜಿ ಭಾರತೀಯರಾಗಿದ್ದು, ಬ್ರಿಟಿಷರು ಅಲ್ಲಿನ ಚಹಾ ತೋಟಗಳಲ್ಲಿ ಕೆಲಸ ಮಾಡಲು ಶ್ರೀಲಂಕಾಕ್ಕೆ ಕರೆದೊಯ್ದಿದ್ದರು.
ವಿಸ್ಡನ್‌ನ ಕ್ರಿಕೆಟರ್ಸ್ ಅಲ್ಮಾನಾಕ್‌ನಿಂದ 2002ರಲ್ಲಿ ಮುರಳೀಧರನ್ ಶ್ರೇಷ್ಠ ಟೆಸ್ಟ್ ಕ್ರಿಕೆಟ್ ಬೌಲರ್ ಎಂಬ ಗೌರವ ಪಡೆದುಕೊಂಡಿದ್ದರು. 2017ರಲ್ಲಿ, ಅವರು ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಮೊದಲ ಮತ್ತು ಏಕೈಕ ಶ್ರೀಲಂಕಾದ ಕ್ರಿಕೆಟಿಗರೆನಿಸಿಕೊಂಡಿದ್ದಾರೆ.
ಆಫ್-ಸ್ಪಿನ್ನರ್‌ನ ವೃತ್ತಿಜೀವನವು ವಿವಾದಗಳಿಂದಲೂ ಕೂಡಿತ್ತು. ಅವರ ಬೌಲಿಂಗ್ ಶೈಲಿಯನ್ನು ಜನರು ಕಾನೂನು ಬಾಹಿರ ಎಂದು ಆಪಾದಿಸಿದ್ದರು. ಮುರಳೀಧರನ್ ಅವರು ಅದರ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. 214 ಟೆಸ್ಟ್ ಪಂದ್ಯಗಳಲ್ಲಿ 1,711 ದಿನಗಳ ಕಾಲ ಟೆಸ್ಟ್ ಐಸಿಸಿ ನಂಬರ್ ಒನ್ ಆಟಗಾರ ಎಂಬ ಪ್ರಶಸ್ತಿ ಪಡೆದುಕೊಂಡಿದ್ದರು.
ಮುರಳೀಧರನ್ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಗರಿಷ್ಠ ವಿಕೆಟ್ ಗಳಿಕೆದಾರ
ಮುತ್ತಯ್ಯ ಮುರಳೀಧರನ್ 2004ರಲ್ಲಿ ವೆಸ್ಟ್ ಇಂಡೀಸ್ನ ವೇಗದ ಬೌಲರ್ ಕಟ್ಸ್ನಿ ವಾಲ್ಶ್ ಹಾಗೂ 2007ರಲ್ಲಿ ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರನ್ನು ಹಿಂದಕ್ಕೆ ಹಾಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದರು. ಅದೇ ರೀತಿ 2009ರಲ್ಲಿ ಕೊಲಂಬೊದಲ್ಲಿ ನಡೆದ ಪಂದ್ಯದ ಬಳಿಕ ಏಕ ದಿನ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಪಾಕಿಸ್ತಾನದ ವಾಸಿಮ್ ಅಕ್ರಮ್ ಅವರ 502 ವಿಕೆಟ್ಗಳ ದಾಖಲೆಯನನು ಅವರು ಈ ವೇಳೆ ಹಿಂದಿಕ್ಕಿದರು. ಒಟ್ಟಾರೆಯಾಗಿ ಅವರು 350 ಪಂದ್ಯಗಳಲ್ಲಿ 23.08 ಸರಾಸರಿಯಲ್ಲಿ 534 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ವIPL bowling Record: ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ನೀಡಿದ ಸ್ಪಿನ್ ಬೌಲರ್ಗಳು
ಮುತ್ತಯ್ಯ ಮುರಳೀಧರನ್ ಒಡಿಐ ವಿಶ್ವಕಪ್‌ನ ಇತಿಹಾಸದಲ್ಲಿ 68 ವಿಕೆಟ್‌ಗಳನ್ನು ಪಡೆಯುವ ಮೂಲಕ ಈ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಅವರು 1996ರಲ್ಲಿ ಏಕ ದಿನ ವಿಶ್ವ ಕಪ್ಗಳನ್ನು ಗೆದ್ದ ಶ್ರೀಲಂಕಾ ತಂಡ ಭಾಗವಾಗಿಯೂ ಇದ್ದರು. 12 ಟಿ20 ಪಂದ್ಯಗಳನ್ನು ಆಡಿರುವ ಅವರು 13 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.