Site icon Vistara News

T20 World Cup | ವಿಶ್ವ ಕಪ್‌ನ ಮೊದಲ ಹಂತದ ತಂಡಗಳು, ತಾಣ, ಗುಂಪು ಇವೆಲ್ಲದರ ಕುರಿತು ಇಲ್ಲಿದೆ ಮಾಹಿತಿ

ಮೆಲ್ಬೋರ್ನ್‌ : ಆಸ್ಟ್ರೇಲಿಯಾದಲ್ಲಿ ಅಯೋಜನೆಗೊಂಡಿರುವ ಟಿ೨೦ ವಿಶ್ವ ಕಪ್‌ (T20 World Cup) ಕಳೆಗಟ್ಟುತಿದೆ. ೧೬ ತಂಡಗಳು ಜಾಗತಿಕ ಮಟ್ಟದ ಟೂರ್ನಿಯಲ್ಲಿ ತನ್ನ ಪ್ರಭಾವ ಬೀರುವುದಕ್ಕೆ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಕೆಲವು ತಂಡಗಳೂ ಈಬಾರಿ ಟ್ರೋಫಿ ಗೆಲ್ಲುವುದು ನಾವೇ ಎಂಬ ಹುಮ್ಮಸ್ಸಿನಲ್ಲಿದೆ. ಇನ್ನೂ ಕೆಲವು ತಂಡಗಳು ಇದೇ ಮೊದಲ ಬಾರಿಗೆ ವಿಶ್ವ ಕಪ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡಿವೆ. ವಿಶ್ವ ಕ್ರಿಕೆಟ್‌ನ ಅಗ್ರ ಕ್ರಮಾಂಕದ 8 ತಂಡಗಳಾದ ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ ಅಕ್ಟೋಬರ್ 22 ರ ಮೊದಲು ಕಣಕ್ಕೆ ಇಳಿಯುವುದಿಲ್ಲ. ಯಾಕೆಂದರೆ ಪ್ರಮುಖ ಸುತ್ತು ಆರಂಭವಾಗುವ ಮೊದಲು ಅರ್ಹತಾ ಸುತ್ತು ಅಥವಾ ಸೂಪರ್‌-೧೨ ನಡೆದು ಅದಲ್ಲಿ ನಾಲ್ಕು ತಂಡಗಳು ಪ್ರಧಾನ ಸುತ್ತಿಗೇರಲಿವೆ.

ಏನಿದು ಮೊದಲ ಸುತ್ತು?

ವಿಶ್ವ ಕಪ್‌ನ ಪ್ರಧಾನ ಸುತ್ತಿನ ಪಂದ್ಯಗಳು ೧೨ ತಂಡಗಳ ನಡುವೆ ನಡೆಯಲಿದೆ. ಹಿಂದಿನ ವಿಶ್ವ ಕಪ್‌ ಹಾಗೂ ಟೂರ್ನಿಗಳ ಆಧಾರದ ಮೇಲೆ ಭಾರತ ಸೇರಿದಂತೆ ೮ ತಂಡಗಳು ನೇರ ಅರ್ಹತೆ ಪಡೆದುಕೊಂಡಿದೆ. ಆದರೆ, ಟೂರ್ನಿಯಲ್ಲಿ ಪಾಲ್ಗೊಳ್ಳುವ ಒಟ್ಟು ತಂಡಗಳು ೧೬. ಹೀಗಾಗಿ ೧೨ ತಂಡಗಳ ಪ್ರಧಾನ ಸುತ್ತಿಗೆ ಬೇಕಾಗಿರುವ ಉಳಿದ ೪ ತಂಡಗಳು ಯಾವುದೆಲ್ಲ ಎಂದು ನಿರ್ಧರಿಸುವ ಹಂತವೇ ಮೊದಲ ಸುತ್ತು. ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಅವುಗಳ ನಡುವೆ ಪಂದ್ಯ ನಡೆಸಲಾಗುತ್ತದೆ. ಎರಡು ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಪ್ರಧಾನ ಹಂತಕ್ಕೆ ಪ್ರವೇಶ ಪಡೆಯುತ್ತದೆ.

ಮೊದಲ ಸುತ್ತಿನಲ್ಲಿರುವ ತಂಡಗಳು ಯಾವುವು?

ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಜೊತೆಗೆ ಜಿಂಬಾಬ್ವೆ, ಐರ್ಲೆಂಡ್, ಯುಎಇ, ನೆದರ್ಲೆಂಡ್ಸ್‌, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಸೇರಿದಂತೆ ಇತರ ಆರು ತಂಡಗಳು ಮೊದಲ ಸುತ್ತಿನಲ್ಲಿ ಸೆಣಸಾಡಲಿವೆ.

ಎಂದು ಆರಂಭ
ಮೊದಲ ಸುತ್ತಿನ ಹಣಾಹಣಿಗಳು ಅಕ್ಟೋಬರ್‌ ೧೬ರಿಂದ ಆರಂಭಗೊಂಡು ಅಕ್ಟೋಬರ್‌ ೨೧ರವರೆಗೆ ನಡೆಯಲಿದೆ.

ಯಾವ ಮಾದರಿ?

ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಶ್ರೀಲಂಕಾ, ನಮೀಬಿಯಾ, ನೆದರ್ಲೆಂಡ್ಸ್ ಮತ್ತು ಯುಎಇ ತಂಡಗಳಿವೆ. ಬಿ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿವೆ. ಪ್ರತಿ ಗುಂಪಿನಿಂದ ಅಗ್ರ-ಎರಡು ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸುತ್ತವೆ.

ಪ್ರಧಾನ ಸುತ್ತಿನಲ್ಲಿ ಈ ತಂಡಗಳ ಸ್ಥಾನಗಳೇನು?

ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಮತ್ತು ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫಘಾನಿಸ್ತಾನ ತಂಡಗಳಿರು ಗ್ರೂಪ್ 1ಕ್ಕೆ ಸೇರಿಸಲಾಗುತ್ತದೆ. ಗ್ರೂಪ್ ಬಿಯ ಅಗ್ರ ತಂಡ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಇರುವ ಬಿ ಗುಂಪಿಗೆ ಸೇರಿಸಲಾಗುತ್ತದೆ.

ಮೊದಲ ಹಂತದ ಪಂದ್ಯಗಳೆಷ್ಟು?

ಮೊದಲ ಹಂತದಲ್ಲಿ ಒಟ್ಟಾರೆ ೧೪ ಪಂದ್ಯಗಳು ನಡೆಯಲಿವೆ.

ತಾಣಗಳು

ಎರಡು ಸ್ಟೇಡಿಯಮ್‌ಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಹೊಬಾರ್ಟ್‌ನ ಬೆಲ್ಲೆರಿವ್ ಓವಲ್ ಮತ್ತು ಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣ.

ಇದನ್ನೂ ಓದಿ |T20 World Cup | ಈ ಬಾರಿಯ ಟಿ20 ವಿಶ್ವ ಕಪ್‌ ಈ ಹೊಸ ನಿಯಮಗಳಂತೆ ನಡೆಯಲಿದೆ, ಅವು ಯಾವುವು?

Exit mobile version