ನವ ದೆಹಲಿ: ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನಲ್ಲಿ ಹಾಲಿ ಚಾಂಪಿಯನ್. ಅವರ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2023ರ ಐಪಿಎಲ್ ಟ್ರೋಫಿ ಗೆದ್ದಿದೆ. ಟಿ 20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ – ಎಲ್ಲಾ ಮೂರು ಐಸಿಸಿ ವೈಟ್-ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗಳಿಸಿದ ಹೆಗ್ಗಳಿಕೆ ಅವರದ್ದು. ಎಲ್ಲ ಐಸಿಸಿ ಪಂದ್ಯಾವಳಿಗಳನ್ನು ಗೆದ್ದ ಏಕೈಕ ಭಾರತೀಯ ನಾಯಕನಾಗಿ ಅವರು ಕ್ರೀಡಾ ಕ್ಷೇತ್ರದಲ್ಲಿ ಇತಿಹಾಸ ಬರೆದಿದ್ದಾರೆ. ತಮ್ಮ ತಂತ್ರಗಾರಿಕೆಯ ಮೂಲಕ ವಿಶ್ವದ ಗಮನ ಸೆಳೆದ ಅವರ ಬರ್ತ್ಡೇ ಜುಲೈ 7ರಂದು. ಈ ದಿನ ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ಭಾರತ ತಂಡಕ್ಕೆ ಹೇಗೆ ಹೇಗೆ ನೆರವಾಯಿತು ಎಂಬುದನ್ನು ನೋಡೋಣ.
ಟಿ 20 ವಿಶ್ವಕಪ್ನ ಕೊನೆಯ ಓವರ್ ಜೋಗಿಂದರ್ ಶರ್ಮಾಗೆ ಕೊಟ್ಟಿರುವುದು
2007ರಲ್ಲಿ ನಡೆದ ಮೊದಲ ಟಿ 20 ವಿಶ್ವಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತವು ಮೇಲುಗೈ ಸಾಧಿಸುತ್ತಾ ಬಂದಿತ್ತು. ಆದರೆ ಕೊನೆಯಲ್ಲಿ ಪಾಕ್ ಬ್ಯಾಟರ್ ಮಿಸ್ಬಾ-ಉಲ್-ಹಕ್ ಅವರು ಭಾರತಕ್ಕೆ ಸಂಕಷ್ಟ ತಂದಿಟ್ಟರು. ಪಂದ್ಯವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸಬೇಕಾಯಿತು. ಮಿಸ್ಬಾ ಕ್ರೀಸ್ ನಲ್ಲಿದ್ದು, ಕೊನೆಯ ಓವರ್ನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು 13 ರನ್ ಗಳ ಅವಶ್ಯಕತೆಯಿತ್ತು. ಧೋನಿ ಹರ್ಭಜನ್ ಸಿಂಗ್ಗೆ ಬೌಲಿಂಗ್ ಮಾಡಿಸಲು ಹೇಳಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಅವರು ಅನುಭವಿ ಆಗಿದ್ದೇ ಅದಕ್ಕೆ ಕಾರಣ. ಆದರೆ, ಧೋನಿ ಆ ರೀತಿ ಮಾಡಲಿಲ್ಲ. ಅನನುಭವಿ ಜೋಗಿಂದರ್ ಶರ್ಮಾ ಕೈಗೆ ಚೆಂಡು ಕೊಟ್ಟರು.
ಪಂದ್ಯದ ನಂತರ ಧೋನಿ, ಮಧ್ಯಮ ವೇಗದ ಬೌಲರ್ ಜೋಗಿಂದರ್ ಮೇಲೆ ನನಗೆ ನಂಬಿಕೆ ಇತ್ತು. ಹಾಗಾಗಿ ಇದು ಸುಲಭ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡಲು ಬಯಸುವ ಯಾರಿಗಾದರೂ ನಾನು ಚೆಂಡನ್ನು ಕೊಡುವ ನಿರ್ಧಾರ ಕೈಗೊಂಡಿದ್ದೆ. ಆಗ ಕಾಣಿಸಿದ್ದು ಜೋಂಗಿಂದರ್ ಎಂದು ಅವರು ಹೇಳಿದ್ದರು. ಶರ್ಮಾ ಮೊದಲ ಎಸೆತವನ್ನೇ ಯಾರ್ಕರ್ ಮಾಡಿದ್ದರು. ನಂತರದ ಎರಡು ಎಸೆತಗಳ ಬಳಿಕ ಮಿಸ್ಬಾ ಅವರನ್ನು ಔಟ್ ಮಾಡಿ ಧೋನಿಯ ನಂಬಿಕೆ ಉಳಿಸಿದ್ದರು.
2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಶಾಂತ್ ಶರ್ಮಾಗೆ ಬೌಲಿಂಗ್ ಕೊಟ್ಟಿರುವುದು
ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿತ್ತು ಭಾರತ. ನಿಧಾನಗತಿಯ ಎಡ್ಜ್ ಬಾಸ್ಟನ್ ಪಿಚ್ನಲ್ಲಿ ಇಂಗ್ಲೆಂಡ್ 130 ರನ್ ಗಳ ಗುರಿ ಬೆನ್ನಟ್ಟುತ್ತಿತ್ತು. ಈ ಅವಧಿಯಲ್ಲಿ ಮಳೆಯ ಅವಕೃಪೆಯೂ ಎದುರಾಯಿತು. ಈ ವೇಳೆ ಧೋನಿಗೆ ಬೌಲಿಂಗ್ಗೆ ಇಳಿಸುವ ಸವಾಲು ಎದುರಾಯಿತು. ವಿಶ್ವಾಸಾರ್ಹ ಸ್ಪಿನ್ ಜೋಡಿ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರನ್ನು ಬಳಸಿಕೊಂಡು ಇಂಗ್ಲೆಂಡ್ ಬ್ಯಾಟರ್ಗಳನ್ನು ಕಟ್ಟಿ ಹಾಕಿದರು. ಆದರೂ ಆತಿಥೇಯ ಆಂಗ್ಲರ ಪಡೆಗೆ ಕೊನೇ 18 ಎಸೆತಗಳಲ್ಲಿ ಕೇವಲ 28 ರನ್ ಬೇಕಾಗಿತ್ತು. ಈ ವೇಳೆ ಧೋನಿ ಇಶಾಂತ್ ಶರ್ಮಾ ಕೈಗೆ ಚೆಂಡನ್ನು ನೀಡಿದರು.
ಅವರ ಎಸೆತಕ್ಕೆ ಇಯಾನ್ ಮಾರ್ಗನ್ ಸಿಕ್ಸರ್ ಭಾರಿಸಿದ ಜತೆಗೆ ಶರ್ಮಾ ಎರಡು ವೈಡರ್ ನೀಡಿದ ಬಳಿಕ ಧೋನಿಯ ನಿರ್ಧಾರ ತಲೆಕೆಳಗಾದಂತೆ ಕಂಡಿತು. ಆದರೆ, ನಂತರ ನಡೆದಿದ್ದೇ ಬೇರೆ. ಇಶಾಂತ್ ನಿಧಾನಗತಿಯ ಚೆಂಡನ್ನು ಸಿಕ್ಸರ್ ಕಡೆಗೆ ಕಳುಹಿಸಲು ಹೋದ ಮಾರ್ಗನ್ ಔಟಾದರು. ಮುಂದಿನ ಎಸೆತದಲ್ಲಿ ರವಿ ಬೋಪಾರಾ ವಿಕೆಟ್ ಪಡೆದರು. ಪಿಚ್ನಲ್ಲಿ ತಳವೂರಿದ್ದ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳುಹಿಸಿ ಭಾರತದ ಜಯಕ್ಕೆ ಹಾದಿ ಮಾಡಿಕೊಟ್ಟರು ಇಶಾಂತ್. ಅಲ್ಲಿಗೆ ಧೋನಿಯ ತಂತ್ರಗಾರಿಕೆ ಮತ್ತೆ ಫಲಕೊಟ್ಟಂತಾಯಿತು.
2011 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಮುಂಬಡ್ತಿ
ನಾಯಕನಾಗಿ ಧೋನಿ ಅವರ ಅತ್ಯಂತ ಪ್ರಸಿದ್ಧ ಮತ್ತು ಕ್ಷಿಪ್ರ ನಿರ್ಧಾರದಲ್ಲಿ ಇದೊಂದು. ಶ್ರೀಲಂಕಾ ವಿರುದ್ಧದ 2011 ರ ವಿಶ್ವಕಪ್ ಫೈನಲ್ನಲ್ಲಿ ತಾವೇ ಸ್ವತಃ ಯುವರಾಜ್ ಸಿಂಗ್ ಅವರಿಗಿಂತ ಮುಂಚಿತವಾಗಿ ಬ್ಯಾಟ್ ಮಾಡಲು ಇಳಿದಿರುವುದು. ತಂಡದ ಮೂರನೇ ವಿಕೆಟ್ ಪತನದ ನಂತರ ಅವರು ತಾವೇ ಬ್ಯಾಟ್ ಹಿಡಿದು ಆಡಲು ಮುಂದಾದರು. ಗೌತಮ್ ಗಂಭೀರ್ ಜತೆ ಅಮೂಲ್ಯ ಜತೆಯಾಟ ನೀಡುವ ಜತೆಗೆ ಲಂಕಾದ ಸ್ಪಿನ್ ಬೌಲರ್ಗಳ ತಂತ್ರವನ್ನು ಅವರಿಬ್ಬರು ವಿಫಲಗೊಳಿಸಿದರು. ಅಲ್ಲದೇ ತಾವು ಕೊನೇ ತನಕ ಉಳಿದು 97 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ಭಾರತ ಕ್ರಿಕೆಟ್ ತಂಡದ ಪಾಲಿಗೆ ಐತಿಹಾಸಿಕ ನಿರ್ಧಾರವೇ ಸರಿ.
ಲಾರ್ಡ್ಸ್ನಲ್ಲಿ ಇಶಾಂತ್ ಶರ್ಮಾ ಬೌನ್ಸರ್ ದಾಳಿ
ಭಾರತವು 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಹೆಣಗಾಡಿತ್ತು. ಆದರೆ ಪ್ರವಾಸದ ಎರಡನೇ ಟೆಸ್ಟ್ನಲ್ಲಿ ಅದು ಬದಲಾಯಿತು. ಅಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ ಭಾರತ ತಂಡ ಪುಟಿದೆದ್ದಿತು. ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 6 ವಿಕೆಟ್ಗಳು ಕೈಯಲ್ಲಿರುವಾಗ 140 ರನ್ಗಳ ಅಗತ್ಯವಿತ್ತು . ಹೀಗಾಗಿ ಗೆಲುವು ಇಂಗ್ಲೆಂಡ್ ತಂಡದ್ದು ಎಂದು ಭಾವಿಸಲಾಗಿತ್ತು. ಧೋನಿ ತಂತ್ರಗಾರಿಕೆ ಬಳಸಿದರು. ಇಶಾಂತ್ ಶರ್ಮಾಗೆ ಚೆಂಡು ಕೊಟ್ಟು ಶಾರ್ಟ್ ಪಿಚ್ ದಾಳಿ ಮಾಡಲು ಹೇಳಿದರು. ಶರ್ಮಾ ಮಿಂಚಿದರು. ಜೀವನ ಶ್ರೇಷ್ಠ 7 ವಿಕೆಟ್ ಪಡೆದರು. ಕೇವಲ 74 ರನ್ ನೀಡಿ ಈ ಸಾಧನೆ ಮಾಡಿದರು. ಭಾರತಕ್ಕೆ 95 ರನ್ಗಳ ಗೆಲುವು ಲಭಿಸಿತು. ಇಶಾಂತ್ ಅವರ ಶಾರ್ಟ್ ಪಿಚ್ ಹಾಗೂ ಬೌನ್ಸರ್ಗಳು ಕೆಲಸ ಮಾಡಿದವು. ಧೋನಿಯ ತಂತ್ರಗಾರಿಕೆ ಮೇಲುಗೈ ಸಾಧಿಸಿತ್ತು.
ಇದನ್ನೂ ಓದಿ : MS Dhoni Birthday: ಧೋನಿ ಎಂಬ ವೈಶಿಷ್ಟ್ಯಗಳ ದೋಣಿ; ಅವರ ಕುರಿತ ಇಂಟರೆಸ್ಟಿಂಗ್ ’ಮಾಹಿ’ತಿ ಇಲ್ಲಿದೆ
ಪೊಲಾರ್ಡ್ ವಿರುದ್ಧ ಸ್ಟ್ರೈಟ್-ಆನ್ ಫೀಲ್ಡಿಂಗ್ ತಂತ್ರ
A superstar since 7 July 1981 🤩 – we love you Thala ❤️#HappyBirthdayMSDhoni #Thala #Dhoni pic.twitter.com/ysJow0PkGI
— JioCinema (@JioCinema) July 6, 2023
ಎಂಎಸ್ ಧೋನಿ ನಾಯಕತ್ವದಲ್ಲಿ ಫೀಲ್ಡಿಂಗ್ ಸೆಟ್ಟಿಂಗ್ ಕೂಡ ಅದ್ಭುತವಾಗಿತ್ತು. 2010ರ ಐಪಿಎಲ್ ಫೈನಲ್ನಲ್ಲಿ ಇದಕ್ಕೊಂದು ತಾಜಾ ಉದಾಹರಣೆಯಿದೆ. ಸಿಎಸ್ಕೆ ಮತ್ತು ಮುಂಬಯಿ ನಡುವಿನ ಫೈನಲ್ ಹಣಾಹಣಿಯದರು. ವಿಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಚೆನ್ನೈ ಕೈಯಿಂದ ಜಯ ಕಸಿಯುವ ಪ್ರಯತ್ನ ಮಾಡುತ್ತಿದ್ದರು. 9 ಎಸೆತಗಳಲ್ಲಿ 27 ರನ್ ಗಳಿಸಿದ್ದರು ಪೊಲಾರ್ಡ್. ಇದನ್ನು ಗ್ರಹಿಸಿದ ಧೋನಿ ಮ್ಯಾಥ್ಯೂ ಹೇಡನ್ ಅವರನ್ನು ಮ್ಯಾಥ್ಯೂ ಹೇಡನ್ ಅವರನ್ನು ಸ್ಟ್ರೈನ್ ಆನ್ ಬಳಿ ಫೀಲ್ಡಿಂಗ್ ನಿಲ್ಲಿಸಿದರು. ಪೊಲಾರ್ಡ್ ಕ್ಯಾಚ್ ನೀಡಿ ನಿರ್ಗಮಿಸಿದರು. ಧೋನಿ 2017 ರ ಫೈನಲ್ನಲ್ಲಿ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡ ಪರವಾಗಿ ಅದೇ ತಂತ್ರ ಬಳಸಿ ಪೊಲಾರ್ಡ್ ಅವರನ್ನು ಔಟ್ ಮಾಡಿಸಿದರು. 2022ರಲ್ಲಿ ಪೊಲಾರ್ಡ್ ಅವರ ಅಂತಿಮ ಐಪಿಎಲ್ ಋತುವಿನಲ್ಲೂ ಅವರನ್ನು ಅದೇ ರೀತಿ ಔಟ್ ಮಾಡಿಸಿದ್ದರು ಧೋನಿ.