ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ (WTC Final 2023) ಆಸ್ಟ್ರೇಲಿಯಾ ತಂಡದ ಪಾರಮ್ಯ ಮುಂದುವರಿದಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸೀಸ್ ಬಳಗ ಟಿ ವಿರಾಮದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದೆ. ಭಾರತ ತಂಡ ಆರಂಭದಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿದರೂ ಬಳಿಕ ಜತೆಯಾದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಸ್ಥಿರ ಪ್ರದರ್ಶನ ನೀಡಿದರು. ಆದರೆ, ಭಾರತ ತಂಡಕ್ಕೆ ಮೂರನೇ ವಿಕೆಟ್ ರೂಪದಲ್ಲಿ ದೊರಕಿದ ಮರ್ನಸ್ ಲಾಬುಶೇನ್ ವಿಕೆಟ್ ಹೆಚ್ಚು ಆಕರ್ಷಕವಾಗಿತ್ತು. ಶಮಿ ಎಸೆತಕ್ಕೆ ಅವರು ಬೌಲ್ಡ್ ಆದ ರೀತಿಯೂ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯಿತು.
ಡಬ್ಲ್ಯುಟಿಸಿ ಫೈನಲ್ ಪಂದ್ಯದ ಮೊದಲ ಸೆಷನ್ನಲ್ಲಿ ಶಮಿ ತುಂಬಾ ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ಕ್ರಿಕೆಟ್ ಅಭಿಮಾನಿಗಳಿಂದ ಹಾಗೂ ವೀಕ್ಷಕ ವಿವರಣೆಗಾರರಿಂದ ಟೀಕೆಗೆ ಒಳಗಾದರು. ಆದಾಗ್ಯೂ, ಭೋಜನ ವಿರಾಮದಿಂದ ಹಿಂದಿರುಗಿದ ಕೂಡಲೇ ಶಮಿ ಎಲ್ಲರಿಗೂ ಉತ್ತರ ಕೊಟ್ಟರು. ತಾವು ಭಾರತದ ಮೊದಲ ಆಯ್ಕೆಯ ವೇಗಿ ಎಂಬುದನ್ನು ಸಾಬೀತುಪಡಿಸಿದರು.
ಭೋಜನ ವಿರಾಮದ ನಂತರದ ಎರಡನೇ ಓವರ್ನಲ್ಲಿ ಮತ್ತು ತಮ್ಮ ಎರಡನೇ ಸ್ಪೆಲ್ನ ಮೊದಲ ಎಸೆತದಲ್ಲಿ ಮೊಹಮ್ಮದ್ ಶಮಿ ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಲಾಬುಶೇನ್ ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು.
ಅದಕ್ಕಿಂತ ಮೊದಲು ದಿನದಾಟದ ಮೊದಲ ಅವಧಿಯ ಯಶಸ್ಸನ್ನು ಎರಡೂ ತಂಡಗಳು ಹಂಚಿಕೊಂಡವು, ಭಾರತವು ಆಸೀಸ್ ಆರಂಭಿಕರನ್ನು ಪೆವಿಲಿಯನ್ಗೆ ಕಳುಹಿಸಿದರೆ ಆಸ್ಟ್ರೇಲಿಯಾ 73 ರನ್ ಗಳಿಸುವ ಮೂಲಕ ಪ್ರತ್ಯುತ್ತರ ನೀಡಿತು. ಡೇವಿಡ್ ವಾರ್ನರ್ ಅದ್ಭುತ ಪ್ರದರ್ಶನ ನೀಡಿ ಎಂಟು ಬೌಂಡರಿಗಳನ್ನು ಗಳಿಸಿದರು. ಆದರೆ 7 ರನ್ಗಳಿಂದ ಅರ್ಧ ಶತಕ ವಂಚಿತರಾದರು.
ವಾರ್ನರ್ ವಿಕೆಟ್ ಪಡೆಯುವ ಹಿಂದಿನ ದೊಡ್ಡ ಕಾರಣ ಕೆ.ಎಸ್.ಭರತ್ ಅವರ ಉತ್ತಮ ಕೀಪಿಂಗ್. ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿ ತಂಡಕ್ಕೆ ಆಯ್ಕೆಯಾಗಿದ್ದ ಅವರು ಈ ಕ್ಯಾಚ್ ಮೂಲಕ ಆಯ್ಕೆಯನ್ನು ಸಮರ್ಧಿಸಿಕೊಂಡರು. ಭರತ್ ಇದಕ್ಕಿಂತ ಹಿಂದೆ ಎರಡು ಬಾರಿ ಇಂಗ್ಲೆಂಡ್ ಪಿಚ್ನಲ್ಲಿ ಆಡಿದ್ದಾರೆ. ಒಂದು ಅಭ್ಯಾಸ ಪಂದ್ಯ, ಮತ್ತೊಂದು ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಎ ಪಂದ್ಯ.