ಬೆಂಗಳೂರು: ಪ್ರವಾಸಿ ಇಂಗ್ಲೆಂಡ್ ಮತ್ತು ಭಾರತ(IND vd ENG) ನಡುವಣ 5 ಪಂದ್ಯಗಳ ಟೆಸ್ಟ್ ಸರಣಿ ಜನವರಿ 25ರಿಂದ ಆರಂಭಗೊಳಲ್ಲಿದೆ. ಸರಿ ಸುಮಾರು 7 ವಾರಗಳ ಕಾಲ ಈ ಟೆಸ್ಟ್ ಸರಣಿ ನಡೆಯಲಿದೆ. ಇದೀಗ ಸರಣಿ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿಯ(Virat Kohli) ಅಹಂ ನಿಲ್ಲಿಸುವೆ ಎಂದು ಓಲಿ ರಾಬಿನ್ಸನ್(Ollie Robinson) ಸವಾಲೆಸೆದಿದ್ದಾರೆ.
ಕ್ರಿಕ್ ಇನ್ಫೋ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಓಲಿ ರಾಬಿನ್ಸನ್, “ಓರ್ವ ಬೌಲರ್ ಅತ್ಯುತ್ತಮ ಆಟಗಾರರ ವಿರುದ್ಧ ಆಡಲು ಬಯಸುತ್ತಾರೆ. ಮತ್ತು ಅಂತಹ ಬ್ಯಾಟರ್ನ ವಿಕೆಟ್ ಕೀಳಲು ಎದುರು ನೋಡುತ್ತಿರುತ್ತಾನೆ. ಕೊಹ್ಲಿ ಅಂತಹವರಲ್ಲಿ ಒಬ್ಬರು. ಅವರು ದೊಡ್ಡ ಅಹಂಕಾರವನ್ನು ಹೊಂದಿದ್ದಾರೆ. ಅವರ ಅಹಂ ನಿಲ್ಲಿಸುವುದು ನನ್ನ ಗುರಿ” ಎಂದು ಹೇಳಿದ್ದಾರೆ.
‘ಈ ಮೊದಲು ಕೊಹ್ಲಿ ಇಂಗ್ಲೆಂಡ್ಗೆ ಬಂದಿದ್ದಾಗ ಅವರಿಗೆ ಬೌಲಿಂಗ್ ಮಾಡಲು ಖುಷಿಯಾಗಿತ್ತು. ಮತ್ತೊಮ್ಮೆ ಅವರ ಜತೆ ಕಾದಾಡಲು ಉತ್ಸುಕನಾಗಿದ್ದೇನೆ” ಎಂದು 30 ವರ್ಷದ ವೇಗಿ ರಾಬಿನ್ಸನ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರು ಇದುವರೆಗೆ ತಮ್ಮನ್ನು ಕೆಣಕಿದ ಯಾವುದೇ ಆಟಗಾರರ್ನು ಕೂಡ ಸುಮ್ಮನೆ ಬಿಟ್ಟವರಲ್ಲ. ಬ್ಯಾಟ್ನಿಂದ ತಕ್ಕ ಉತ್ತರ ನೀಡೀಯೇ ನೀಡುತ್ತಾರೆ. ಅಲ್ಲದೆ ಆಕ್ರಮಣಕಾರಿ ಆಟ ಪ್ರದರ್ಶಿಸಿ ಎದುರಾಳಿಯನ್ನು ಸದೆಬಡಿಯುತ್ತಾರೆ. ಇತ್ತಂಡಗಳ ಈ ಸರಣಿಯನ್ನು ರಾಬಿನ್ಸನ್ ಮತ್ತು ಕೊಹ್ಲಿಯ ಮುಖಾಮುಖಿ ಎಂದೇ ಕರೆದರು ತಪ್ಪಾಗಲಾರದು.
'Virat Kohli Got a Big Ego': Ollie Robinson on Battle With Virat Kohli Ahead of IND vs ENG Test Series pic.twitter.com/rfJE6KZNYq
— Amit Patel (@PatelCricinfo) January 20, 2024
ಕೊಹ್ಲಿ vs ರಾಬಿನ್ಸನ್
ವಿರಾಟ್ ಕೊಹ್ಲಿಯನ್ನು ರಾಬಿನ್ಸನ್ ಇದುವರೆಗೆ ಮೂರು ಬಾರಿ ಔಟ್ ಮಾಡಿದ್ದಾರೆ. ಇದೇ ಆತ್ಮವಿಶ್ವಾಸದಿಂದ ಅವರು ಈಗ ಕೊಹ್ಲಿಗೆ ಸವಾಲು ಹಾಕಿದ್ದಾರೆ. ರಾಬಿನ್ಸನ್ 19 ಟೆಸ್ಟ್ ಪಂದ್ಯ ಆಡಿ 76 ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ India vs England, 1st Test: ಕೋಚ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ನಿಷೇಧ ಶಿಕ್ಷೆ ಎದುರಿಸಿದ್ದ ರಾಬಿನ್ಸನ್
2021ರಲ್ಲಿ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಅಶ್ಲೀಲ ಹಾಗೂ ಜನಾಂಗೀಯ ನಿಂದನೆಯ ಟ್ವೀಟ್‌ಗೆ ಸಂಬಂಧಿಸಿ ರಾಬಿನ್ಸನ್ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿತ್ತು. ರಾಬಿನ್ಸನ್ ಅವರಿಗೆ ತಪ್ಪಿನ ಶಿಕ್ಷೆಯಾಗಿ 8 ಪಂದ್ಯಗಳ ನಿಷೇಧದೊಂದಿಗೆ 4,400 ಡಾಲರ್ ದಂಡ ಕೂಡ ವಿಧಿಸಲಾಗಿತ್ತು. ರಾಬಿನ್ಸನ್ ಪದಾರ್ಪಣ ಟೆಸ್ಟ್‌ನಲ್ಲೇ 7 ವಿಕೆಟ್ ಉರುಳಿಸುವ ಮೂಲಕ ಇಂಗ್ಲೆಂಡಿನ ಯಶಸ್ವಿ ಬೌಲರ್ ಆಗಿ ಮೂಡಿಬಂದಿದ್ದರು.
5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ತಂಡ(IND vs ENG) ಭಾರತಕ್ಕೆ ಬರುವ ವೇಳೆ ಜನಪ್ರಿಯ ಬಾಣಸಿಗ ಒಮರ್ ಮೆಜಿಯಾನ್ ಅವರನ್ನು ಕೂಡ ಕರೆತರಲಿದೆ. 7 ವಾರಗಳ ಪ್ರವಾಸದ ವೇಳೆ ಆಟಗಾರರು, ಅನಾರೋಗ್ಯಕ್ಕೀಡಾಗುವುದನ್ನು ತಪ್ಪಿಸುವ ಸಲುವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಈ ಕ್ರಮ ಕೈಗೊಂಡಿದೆ.
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ),ಜೋ ರೂಟ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್, ಗಸ್ ಅಟ್ಕಿನ್ಸನ್, ರೆಹಾನ್ ಅಹ್ಮದ್, ಜಾನಿ ಬೇರ್ ಸ್ಟೋ, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಓಲಿ ಪೋಪ್, ಓಲಿ ರಾಬಿನ್ಸನ್.