ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ ಐಪಿಎಲ್(IPL 2024) ಲೀಗ್ ಪಂದ್ಯಗಳಿಗೆ ನೀರಿನ ಕೊರತೆಯ ಸಮಸ್ಯೆ ಬಾಧಿಸುವುದಿಲ್ಲ ಎಂದು ಕೆಎಸ್ಸಿಎ ಆಡಳಿತ ಮಂಡಳಿ ಖಚಿತಪಡಿಸಿದ ಬಳಿಕ ಸಂತಸಗೊಂಡಿದ್ದ ಆರ್‌ಸಿಬಿ ಅಭಿಮಾನಿಗಳು ಇದೀಗ ಟಿಕೆಟ್(IPL Ticket Prices) ವಿಚಾರದಲ್ಲಿ ಹೌಹಾರಿದ್ದಾರೆ.
ಚಿನ್ನಸ್ವಾಮಿಯಲ್ಲಿ ನಡೆಯುವ ಮೊದಲ ಹಂತದ ಐಪಿಎಲ್ನ ತವರಿನ 3 ಪಂದ್ಯಗಳ ಟಿಕೆಟ್‌ಗಳನ್ನು ಆರ್‌ಸಿಬಿ ಗುರುವಾರ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿದೆ. ಈ ಟಿಕೆಟ್ ಬೆಲೆ ನೋಡಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ಆರ್‌ಸಿಬಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಲಿದೆ. ಮಾ.25ಕ್ಕೆ ಪಂಜಾಬ್, 29ಕ್ಕೆ ಕೋಲ್ಕತಾ, ಏ.2ಕ್ಕೆ ಲಕ್ನೋ ವಿರುದ್ಧ ಆಡಲಿದ್ದು, ಈ ಪಂದ್ಯಗಳ ಕನಿಷ್ಠ ಟಿಕೆಟ್ ಬೆಲೆ 2,300 ಹಾಗೂ ಗರಿಷ್ಠ ಮೌಲ್ಯ 42,350 ವರೆಗೂ ಇದೆ. ಆರ್‌ಸಿಬಿ ಇದನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಟಿಕೆಟ್ ದರ ಕಂಡು ಆರ್‌ಸಿಬಿ ವಿರುದ್ಧ ತವರಿನ ಅಭಿಮಾನಿಗಳೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಟಿಕೆಟ್ ಬೆಲೆ ಮತ್ತಷ್ಟು ಹೆಚ್ಚಾಗಿರುವು ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಕಳೆದ ವರ್ಷ ಆರ್‌ಸಿಬಿ ಪಂದ್ಯಗಳ ಟಿಕೆಟ್ ಮೌಲ್ಯ 2,000ಕ್ಕಿಂತ ಹೆಚ್ಚಿತ್ತು. ಇದು ಕೂಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ IPL 2024: ಕೋಚ್, ರೋಹಿತ್ಗೆ ಅವಮಾನ ಮಾಡಿದ ಹಾರ್ದಿಕ್ ಪಾಂಡ್ಯ; ವಿಡಿಯೊ ವೈರಲ್
ಟಿಕೆಟ್‌ಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಮಾರಾಟ ಮಾಡುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಟಿಕೆಟ್‌ಗೆ ಕನಿಷ್ಠ 1,200 ನಿಗದಿಪಡಿಸಲಾಗಿತ್ತು. ಈ ಬಾರಿ ಬಾಕ್ಸ್ ಆಫೀಸ್‌ನಲ್ಲಿ ಮಾರಾಟ ಮಾಡದರೂ ಕೂಡ ಬೆಲೆ ಹೆಚ್ಚಿರುವ ಸಾಧ್ಯತೆ ಕಂಡು ಬಂದಿದೆ. ಒಟ್ಟಾರೆಯಾಗಿ ಪಂದ್ಯದ ಟಿಕೆಟ್ ದರ ಹೆಚ್ಚಳವಾದದ್ದು ಅಭಿಮಾನಿಗಳಿ ಬೇಸರ ತಂದಿದೆ.
ಕೊಹ್ಲಿ ಗೈರಿನಲ್ಲಿ ಅಭ್ಯಾಸ
ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್ 22ರಂದು ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ತಂಡ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಆದರೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(virat kohli) ಇನ್ನೂ ಕೂಡ ತಂಡ ಸೇರಿಲ್ಲ. ಅವರ ಅನುಪಸ್ಥಿತಿಯಲ್ಲೇ ತಂಡ ಅಭ್ಯಾಸ ನಡೆಸುತ್ತಿದೆ. ಕೊಹ್ಲಿ ತಂಡ ಸೇರಲು ಇನ್ನೂ ಕೆಲವು ದಿನಗಳಾಗುತ್ತವೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.
ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಅಲ್ಜಾರಿ ಜೋಸೆಫ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ವೆಲ್ ಸೇರಿ ಉಳಿದ ಎಲ್ಲ ಆಟಗಾರರು ಅಭ್ಯಾಸ ನಿರತರಾಗಿದ್ದಾರೆ. ಆದರೆ ಕೊಹ್ಲಿ ಗೈರು ಎದ್ದು ಕಾಣುತ್ತಿತ್ತು. ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಿದ್ದ ವಿರಾಟ್ ಕೊಹ್ಲಿ(Virat Kohli), ತಮ್ಮ ಪತ್ನಿ ಅನುಷ್ಕಾ ಶರ್ಮ ಅವರ ಹೆರಿಗೆಯ ಕಾರಣದಿಂದ ಲಂಡನ್ಗೆ ತೆರೆಳಿದ್ದರು. ಜನವರಿ 15ರಂದು ಕೊಹ್ಲಿ ಪತ್ನಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಲಂಡನ್ನಲ್ಲಿಯೇ ಇದ್ದಾರೆ.