Site icon Vistara News

IND vs AUS: ಗೆಲುವಿನಲ್ಲೂ ದಾಖಲೆ ಬರೆದ ಯಂಗ್​ ಟೀಮ್​ ಇಂಡಿಯಾ

Highest targets successfully chased by India in T20Is

ವಿಶಾಖಪಟ್ಟಣ: ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಯಂಗ್​ ಟೀಮ್ ಇಂಡಿಯಾ ಪಡೆ ಗೆಲುವಿನಲ್ಲಿಯೂ ದಾಖಲೆಯೊಂದನ್ನು ಬರೆದಿದೆ. ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಮೊತ್ತವನ್ನು ಚೇಸಿಂಗ್​ ನಡೆಸಿದ ದಾಖಲೆ ನಿರ್ಮಿಸಿದೆ.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆಸ್ಟ್ರೇಲಿಯಾ ಜೋಶ್​ ಇಂಗ್ಲಿಸ್(110)​ ಅವರ ಆಕರ್ಷಕ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ ​ ಮೂರು ವಿಕೆಟ್​ ಕಳೆದುಕೊಂಡು 208 ರನ್​ ಗಳಿಸಿತು. ಬೃಹತ್​ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ಭಾರತಕ್ಕೆ ಅಂತಿಮ ಓವರ್​ನಲ್ಲಿ ಗೆಲುವಿಗೆ 7 ರನ್​ ಬೇಕಿತ್ತು. ಈ ವೇಳೆ ನಾಟಕೀಯ ಕುಸಿತ ಕಂಡ ಭಾರತ ಸತತವಾಗಿ ಮೂರು ವಿಕಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಆತ್ಮವಿಶ್ವಾಸ ಕಳೆದುಕೊಳ್ಳದ ರಿಂಕು ಸಿಂಗ್​ ಸಿಕ್ಸರ್​ ಬಾರಿಸಿ ವಿಜಯ ಪತಾಕೆ ಹಾರಿಸಿದರು. ಅಚ್ಚರಿ ಎಂದರೆ ಇದು ನೋಬಾಲ್​ ಕೂಡ ಆಗಿತ್ತು. ವಿಕೆಟ್​ ಪತನಗೊಂಡರೂ ಭಾರತ ಗೆಲುವು ಸಾಧಿಸುತ್ತಿತ್ತು.

ಇದನ್ನೂ ಓದಿ IND vs AUS: ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಭಾರತ; ಆಸೀಸ್​ ವಿರುದ್ಧ ರೋಚಕ ಜಯ

ವಿಂಡೀಸ್​ ವಿರುದ್ಧದ ದಾಖಲೆ ಪತನ

2019ರಲ್ಲಿ ಹೈದರಾಬಾದ್​ನಲ್ಲಿ ನಡೆದಿದ್ದ ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಚೇಸಿಂಗ್​ ಮೂಲಕ 208ರನ್ ಗಳಿಸಿ ಗೆಲುವು ದಾಖಲಿಸಿತ್ತು. ಇದು ಈವರೆಗಿನ ಭಾರತದ ಅತ್ಯಧಿಕ ರನ್​ ಚೇಸಿಂಗ್​ ದಾಖಲೆಯಾಗಿತ್ತು. ಆದರೆ ಇದೀಗ ಯಂಗ್​ ಇಂಡಿಯಾ ಪಡೆ 209 ರನ್​ ಬಾರಿಸಿ ಈ ದಾಖಲೆಯನ್ನು ಮುರಿದಿದೆ. ಅದರಲ್ಲೂ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ಎನ್ನುವುದು ಇಲ್ಲಿ ಮಹತ್ವದ ವಿಚಾರವಾಗಿದೆ. ಯುವ ಪಡೆಯ ಈ ಗೆಲುವು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ಗೂ ಮುನ್ನ ಭರವಸೆಯೊಂದನ್ನು ಮೂಡಿಸಿದೆ.

ಇದು ಭಾರತ ತಂಡ ಟಿ20 ಕ್ರಿಕೆಟ್​ನಲ್ಲಿ 200 ಪ್ಲಸ್​ ಮೊತ್ತವನ್ನು ಚೇಸಿಂಗ್​ ನಡೆಸಿ ಗೆದ್ದ 5ನೇ ನಿದರ್ಶನವಾಗಿದೆ. 4 ಬಾರಿ ಗೆದ್ದಿದ್ದ ದಕ್ಷಿಣ ಆಫ್ರಿಕಾದ ದಾಖಲೆ ಪತನಗೊಂಡಿತು. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಲಾ ಮೂರು ಬಾರಿ ಈ ಸಾಧನೆ ಮಾಡಿದೆ.

ಇಶಾನ್​-ಸೂರ್ಯ ಬ್ಯಾಟಿಂಗ್​ ಮಿಂಚು

22 ರನ್​ಗೆ 2 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಕಂಡಿದ್ದ ತಂಡಕ್ಕೆ ನಾಯಕ ಸೂರ್ಯಕುಮಾರ್​ ಮತ್ತು ಇಶಾನ್​ ಕಿಶನ್​ ಬಿರುಸಿನ ಬ್ಯಾಟಿಂಗ್​ ಮೂಲಕ ಆಸರೆಯಾದರು. ಇಬ್ಬರು ಸೇರಿಕೊಂಡು ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆ ಸುರಿಸಿದರು. ಆಸೀಸ್​ ಬೌಲರ್​ಗಳು ಲಯ ಕಳೆದುಕೊಂಡರು. ಬೌಂಡರಿ ಮೂಲಕವೇ ಇಶಾನ್​ ಅರ್ಧಶತಕ ಪೂರ್ತಿಗೊಳಿಸಿದರು.

ಅರ್ಧಶತಕ ಪೂರ್ತಿಗೊಂಡ ಮರು ಎಸೆತದಲ್ಲಿ ಸಿಕ್ಸರ್​ ಬಾರಿಸಿದ ಇಶಾನ್​ ಮತ್ತೊಂದು ಸಿಕ್ಸರ್​ ಪ್ರಯತ್ನದಲ್ಲಿ ಎಡವಿ ಬೌಂಡರಿ ಲೈನ್​ನಲ್ಲಿ ಮ್ಯಾಥ್ಯೂ ಶಾರ್ಟ್​ ಕೈಗೆ ಕ್ಯಾಚ್​ ನೀಡಿ ಔಟಾದರು. 39 ಎಸೆತ ಎದುರಿಸಿದ ಕಿಶನ್​ 5 ಆಕರ್ಷಕ ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 58 ರನ್​ ಗಳಿಸಿದರು. ಸೂರ್ಯಕುಮಾರ್​ ಮುತ್ತು ಇಶಾನ್​ ಮೂರನೇ ವಿಕೆಟ್​ಗೆ 112ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಇಶಾನ್​ ವಿಕೆಟ್​ ಬಿದ್ದರೂ ವಿಚಲಿತರಾಗದ ಸೂರ್ಯ ತಮ್ಮ ಸ್ಫೋಟಕ ಬ್ಯಾಟಿಂಗ್​ ಮುಂದುವರಿಸಿದರು. ಅವರು ಕೂಡ ಸಿಕ್ಸರ್​ ಬಾರಿಸುವ ಅರ್ಧಶತಕ ಬಾರಿಸಿದರು.

ದಡ ಸೇರಿಸಿದ ರಿಂಕು ಸಿಂಗ್​

ಇಶಾನ್​ ವಿಕೆಟ್​ ಪತನದ ಬಳಿಕ ಬಂದ ತಿಲಕ್​ ವರ್ಮ ಬಡಬಡನೆ 2 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಇದೇ ಆಟವನ್ನು ಮುಂದುವರಿಸುವಲ್ಲಿ ಎಡವಿದ ಅವರು 12 ರನ್​ಗೆ ವಿಕೆಟ್​ ಕೈಚೆಲ್ಲಿದರು. ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಆದರೆ ಎದೆಗುಂದದ ಸೂರ್ಯಕುಮಾರ್​ ಯಾದವ್ 42 ಎಸೆತಗಳಿಂದ 80 ರನ್​ ಬಾರಿಸಿ ಮತ್ತೆ ತಂಡದ ನೆರವಿಗೆ ನಿಂತರು. ಅವರ ಈ ಸ್ಫೋಟಕ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಿತು. ಐಪಿಎಲ್​ನ ಸಿಕ್ಸರ್​ ಕಿಂಗ್​ ಖ್ಯಾತಿಯ ರಿಂಕು ಸಿಂಗ್​ ಅಜೇಯ ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Exit mobile version