ನವದೆಹಲಿ: ಒಂದು ಕಾಲದಲ್ಲಿ ಭಾರತದ ಇನಿಂಗ್ಸ್ ಆರಂಭಿಸುತ್ತಿದ್ದ ಹಿರಿಯ ಏಡಗೈ ಬ್ಯಾಟರ್ ಶಿಖರ್ ಧವನ್ ಅವರು ತಂಡಕ್ಕೆ ಆಯ್ಕೆ ಮಾಡದೇ ಇರುವ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪಕ್ಷ ಏಷ್ಯನ್ ಗೇಮ್ಸ್ಗೂ(Asian Games) ಅವಕಾಶ ನೀಡಿಲ್ಲವಲ್ಲ ಎಂದು ಹೇಳಿದ್ದಾರೆ.
“ಬ್ಯಾಟಿಂಗ್ ಫಾರ್ಮ್ನಲ್ಲಿ ಇರದೇ ಇದ್ದರೆ ಆಗ ಆಯ್ಕೆ ಮಾಡದಿರುವುದರಲ್ಲಿ ಒಂದು ನ್ಯಾಯವಿದೆ. ಆದರೆ ಕಳೆದ 2 ವರ್ಷಗಳಿಂದ ನಾನು ಭಾರತ ಕ್ರಿಕೆಟ್ ತಂಡದ ಪರ ಆಡುವ ಅವಕಾಶವಂಚಿತನಾಗಿದ್ದೇನೆ. ಐಪಿಎಲ್ನಲ್ಲಿ(IPL) ಉತ್ತಮ ಪ್ರದರ್ಶನ ತೋರಿದ್ದೇನೆ. ಜತೆಗೆ ಫಾರ್ಮ್ನಲ್ಲಿರುವಾಗಲೇ ನನ್ನು ತಂಡದಿಂದ ಕೈ ಬಿಡಲಾಗಿತ್ತು. ಇದು ಯಾವ ಕಾರಣಕ್ಕೆ ಎಂದು ಇದುವರೆಗೂ ನನಗೆ ತಿಳಿದಿಲ್ಲ. ಕಳಪೆ ಪ್ರದರ್ಶನ ತೋರುತ್ತಿರುವ ಅದೆಷ್ಟೋ ಆಟಗಾರರು ಭಾರತ ಸೀನಿಯರ್ ತಂಡದಲ್ಲಿ ಸತತವಾಗಿ ಅವಕಾಶ ಪಡೆಯುತ್ತಿದ್ದಾರೆ. ಏಷ್ಯನ್ ಗೇಮ್ಸ್ಗೂ ನನ್ನನ್ನು ಪರಿಗಣಿಸದೇ ಇರುವುದನ್ನು ಕೇಳಿ ಆಘಾತವಾಯಿತು” ಎಂದು ಶಿಖರ್ ಧವನ್ ಅಳಲು ತೋಡಿಕೊಂಡರು.
ಯುವ ಆಟಗಾರರ ಮೇಲೆ ನಂಬಿಕೆ
ತಂಡದಲ್ಲಿ ಅನೇಕ ಯುವ ಆಟಗಾರರು ಬೆಳಕಿಗೆ ಬಂದಿದ್ದಾರೆ ಶುಭಮನ್ ಗಿಲ್,ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್ ಸೇರಿ ಇನ್ನು ಹಲವು ಆಟಗಾರರು ಇದ್ದಾರೆ. ಈ ಎಲ್ಲ ಯುವ ಪಡೆ ಭಾರತ ತಂಡದಲ್ಲಿ ಉನ್ನತ ಮಟ್ಟದ ಸಾಧನೆ ತೋರುವಂತಾಗಬೇಕು. ಯುವ ಆಟಗಾರರಿಗೆ ನನ್ನ ಪ್ರೋತ್ಸಾಹ ಸದಾ ಇರಲಿದೆ. ಏಷ್ಯನ್ ಗೇಮ್ಸ್ನಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಗಾಯಕ್ವಾಡ್ಗೆ ಶುಭಹಾರೈಕೆ, ಆತ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬಲ್ಲ ಎಂದು ಧವನ್ ಪಿಟಿಐಗೆ ತಿಳಿಸಿದ್ದಾರೆ.
ಕ್ರಿಕೆಟ್ ಭವಿಷ್ಯದ ಬಗ್ಗೆ ಚಿಂತಿಸಿಲ್ಲ
“ನಾನು ಯಾವುದೇ ಆಯ್ಕೆದಾರರೊಂದಿಗೆ ನನ್ನ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತನಾಡಿಲ್ಲ. ನಾನು ಎನ್‌ಸಿಎಗೆ ಹೋಗುತ್ತಿದ್ದೇನೆ. ಅಲ್ಲಿ ನನ್ನ ಸಮಯವನ್ನು ನಾನು ಆನಂದಿಸುತ್ತೇನೆ, ಸೌಲಭ್ಯಗಳು ಉತ್ತಮವಾಗಿವೆ. ಎನ್‌ಸಿಎ ನನ್ನ ವೃತ್ತಿಜೀವನವನ್ನು ರೂಪಿಸಿದೆ ಮತ್ತು ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳುವ ಮೂಲಕ ಧವನ್ ತಮ್ಮ ನಿವೃತ್ತಿ ಸದ್ಯದಲ್ಲಿ ಇಲ್ಲ ಎನ್ನುವ ಸುಳಿವು ನೀಡಿದ್ದಾರೆ.
ಇದನ್ನೂ ಓದಿ IPL 2023: ಚಿರತೆಯಂತೆ ಜಿಗಿದು ಕ್ಯಾಚ್ ಪಡೆದ ಶಿಖರ್ ಧವನ್; ವಿಡಿಯೊ ವೈರಲ್
ಮುಂದಿನ ತಿಂಗಳು ಟೂರ್ನಿ ಆರಂಭ
ಏಷ್ಯನ್ ಕ್ರೀಡಾಕೂಟ ಸೆಪ್ಟಂಬರ್ ಮತ್ತು ಅಕ್ಟೋಬರ್ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ(Hangzhou ) ನಡೆಯಲಿದೆ. ಇದೇ ಮೊದಲ ಬಾರಿ ಭಾರತ ಪುರುಷರ ಕ್ರಿಕೆಟ್ ತಂಡ ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಏಷ್ಯಾ ಕಪ್ ಹಾಗೂ ಐಸಿಸಿ ಏಕದಿನ ವಿಶ್ವಕಪ್(ICC World Cup) ಟೂರ್ನಿಯ ಹಿನ್ನೆಲೆಯಲ್ಲಿ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಇಲ್ಲಿ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ಸ್ಟಾರ್ಗಳು ಇಲ್ಲಿ ಸ್ಥಾನ ಪಡೆದಿದ್ದಾರೆ ಋತುರಾಜ್ ಗಾಯಕ್ವಾಡ್(Ruturaj Gaikwad) ತಂಡದ ನಾಯಕನಾಗಿದ್ದಾರೆ.