ಮೆಲ್ಬೋರ್ನ್ : ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡ ಟಿ೨೦ ವಿಶ್ವ ಕಪ್‌ನ ಫೈನಲ್‌ಗೇರಿದಾಗ, ೧೯೯೨ರ ಏಕ ದಿನ ವಿಶ್ವ ಕಪ್‌ನ ಫಲಿತಾಂಶ ಮರುಕಳಿಸುತ್ತದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಪಾಕ್ ತಂಡವೇ ಫೇವರಿಟ್ ೧೯೯೨ರಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕ್ ತಂಡದ ಚಾಂಪಿಯನ್ ಆದಂತೆ, ಈ ಬಾರಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಟ್ರೋಫಿ ಗೆಲ್ಲುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಎಲ್ಲ ಲೆಕ್ಕಾಚಾರಗಳು ಬುಡಮೇಲಾಗಿವೆ. ಪಾಕ್ ತಂಡ ಫೈನಲ್‌ನಲ್ಲಿ ಸೋತಿದ್ದು ಇಂಗ್ಲೆಂಡ್ ತಂಡ ಚಾಂಪಿಯನ್‌ಪಟ್ಟ ಅಲಂಕರಿಸಿದೆ. ಇದರೊಂದಿಗೆ ೩೦ ವರ್ಷಗಳ ಬಳಿಕ ಇತಿಹಾಸ ಮರುಕಳುಹಿಸುತ್ತದೆ ಎಂದು ಕಾಯುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.
೧೯೨೨ರಲ್ಲಿ ನಡೆದ ಬೆನ್ಸನ್ ಆಂಡ್ ಎಜಸ್ ವಿಶ್ವ ಕಪ್‌ನ ಫೈನಲ್ ಪಂದ್ಯವೂ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿಯೇ ನಡೆದಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ೫೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೪೯ ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಗ್ರಹಾಮ್ ಗೂಚ್ ನೇತೃತ್ವದ ಇಂಗ್ಲೆಂಡ್ ತಂಡ ೪೯.೨ ಓವರ್‌ಗಳಲ್ಲಿ ೨೨೭ ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ನಿರಾಸೆ ಎದುರಿಸಿತ್ತು. ಅಂತೆಯೇ ಭಾನುವಾರ ನಡೆದ ಪಂದ್ಯಕ್ಕೂ ಮೂದಲು ಬ್ಯಾಟಿಂಗ್ ಹಾಗೂ ಬೌಲಿಂಗ್ ಸಾಮರ್ಥ್ಯದ ಮೂಲಕ ಪಾಕಿಸ್ತಾನ ತಂಡವೇ ಫೇವರಿಟ್ ಎನಿಸಿಕೊಂಡಿತ್ತು.
ಭಾನುವಾರದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಾಕಿಸ್ತಾನಕ್ಕೆ ದೊಡ್ಡ ಮೊತ್ತ ಪೇರಿಸಲು ಇಂಗ್ಲೆಂಡ್ ತಂಡದ ಬೌಲರ್‌ಗಳು ಅವಕಾಶ ಕೊಡಲಿಲ್ಲ. ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೩೭ ರನ್‌ಗಳಿಗೆ ಕುಸಿತ ಕಂಡಿತು. ಇದಕ್ಕೆ ಪ್ರತಿಯಾಗಿ ಆಡಿದ ಇಂಗ್ಲೆಂಡ್ ತಂಡವೂ ಉತ್ತಮ ಆರಂಭ ಪಡೆಯಲಿಲ್ಲ. ಆದರೆ, ಬೆನ್ ಸ್ಟೋಕ್ಸ್ (೫೨*) ಅಜೇಯ ಅರ್ಧ ಶತಕ ಬಾರಿಸುವ ಮೂಲಕ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಪಾಕಿಸ್ತಾನ ತಂಡವೇನಾದರೂ ಚಾಂಪಿಯನ್‌ಪಟ್ಟ ಅಲಂಕರಿಸಿದರೆ ೨೦೪೮ಕ್ಕೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರು ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ತಮಾಷೆ ಮಾಡಿದ್ದರು.
ಇದನ್ನೂ ಓದಿ | T20 World Cup | ಪಾಕಿಸ್ತಾನ ತಂಡವನ್ನು ಮಣಿಸಿದ ಇಂಗ್ಲೆಂಡ್ ಟಿ20 ವಿಶ್ವ ಚಾಂಪಿಯನ್