ನಾಗ್ಪುರ: ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ(Rohit Sharma) ನೂತನ ದಾಖಲೆಯೊಂದನ್ನು ಬರೆದಿದ್ದಾರೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ, ನಾಯಕನಾಗಿ ಮೂರು ಮಾದರಿಯ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಮೊದಲ ಮತ್ತು ಏಕೈಕ ಭಾರತೀಯ ಆಟಗಾರ ಎಂಬ ಸಾಧನೆ ಮಾಡಿದರು. ಇವರ ಶತಕದ ನೆರವಿನಿಂದ ಸದ್ಯ ಭಾರತ ತಂಡ ಇನಿಂಗ್ಸ್ ಮುನ್ನಡೆ ಸಾಧಿಸಿ ಆಟ ಮುಂದುವರಿಸಿದೆ. ರೋಹಿತ್ 120 ರನ್ ಗಳಿಸಿ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ IND VS AUS: ಜಡೇಜಾ ಬೆರಳಿಗೆ ಹಚ್ಚಿಕೊಂಡಿದ್ದೇನು?; ಸ್ಪಷ್ಟೀಕರಣ ನೀಡಿದ ಬಿಸಿಸಿಐ
ಆಸೀಸ್ ವಿರುದ್ಧ ಮೊದಲ ಶತಕ
ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಬಾರಿಸಿದ ಮೊದಲ ಶತಕ ಇದಾಗಿದೆ. ಡಿಸೆಂಬರ್ 9, 2014 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಿದ್ದ ರೋಹಿತ್ ಶರ್ಮಾ, ಇದುವರೆಗೆ ಆಸೀಸ್ ವಿರುದ್ಧ 14 ಟೆಸ್ಟ್ ಇನಿಂಗ್ಸ್ಗಳನ್ನು ಆಡಿದ್ದಾರೆ. ಆದರೆ ಒಂದೂ ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಇದೀಗ 15ನೇ ಟೆಸ್ಟ್ ಇನಿಂಗ್ಸ್ನಲ್ಲಿ ರೋಹಿತ್ ಶತಕ ಬಾರಿಸಿ ಆಸೀಸ್ ವಿರುದ್ಧ ತಮ್ಮ ಶತಕದ ಬರವನ್ನು ನೀಗಿಸಿಕೊಂಡರು. ಒಟ್ಟು 212 ಎಸೆತ ಎದುರಿಸಿದ ರೋಹಿತ್ 120 ರನ್ ಗಳಿಸಿ ಔಟಾದರು. ಈ ಮನಮೋಹಕ ಇನಿಂಗ್ಸ್ ವೇಳೆ 15 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು.