ಭುವನೇಶ್ವರ: ಭಾರತ ಆತಿಥ್ಯದಲ್ಲಿ ನಡೆಯುವ ಪುರುಷರ ಎಫ್‌ಐಎಚ್ ಹಾಕಿ ವಿಶ್ವ ಕಪ್ ಟೂರ್ನಿ ಶುಕ್ರವಾರ(ಜನವರಿ 13) ಆರಂಭವಾಗಲಿದೆ. ಈ ಬಾರಿ ವಿಶ್ವ ಹಾಕಿ ಸಮರದಲ್ಲಿರುವ ನೆಚ್ಚಿನ ಐದು ತಂಡಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬೆಲ್ಜಿಯಂ
ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಬೆಲ್ಜಿಯಂ ತಂಡ ಇತ್ತೀಚೆಗೆ ಅತ್ಯಂತ ಬಲಿಷ್ಠವಾಗಿದೆ. ಈ ತಂಡ 2018ರ ವಿಶ್ವಕಪ್‌ನಲ್ಲಿ ತನ್ನ ಮೊದಲ ವಿಶ್ವಕಪ್ ಪ್ರಶಸ್ತಿ ಗೆದ್ದಿತ್ತು. ಪ್ರೊ ಹಾಕಿ ಲೀಗ್‌ನಲ್ಲಿ 2ನೇ ಸ್ಥಾನಿಯಾಗಿರುವ ಬೆಲ್ಜಿಯಂ, ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಪ್ರಮುಖ ಕೂಟಗಳಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ವಿಶ್ವದ ಬಲಿಷ್ಠ ತಂಡಗಳಿಗೆ ಸೋಲುಣಿಸಿದೆ. ಹಾಗಾಗಿ ಈ ಬಾರಿಯ ವಿಶ್ವ ಕಪ್ ಟೂರ್ನಿಯ 16 ತಂಡಗಳ ಪೈಕಿ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ.
ಆಸ್ಟ್ರೇಲಿಯಾ
ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾ ತಂಡ ಪ್ರತಿ ಬಾರಿಯಂತೆ ಈ ಬಾರಿಯೂ ಬಲಿಷ್ಠವಾಗಿ ಗೋಚರಿಸಿದೆ. ಆಸೀಸ್ ತಂಡ ತನ್ನ ಮೊದಲ ವಿಶ್ವ ಕಪ್ ಪ್ರಶಸ್ತಿಯನ್ನು 1986ರಲ್ಲಿ ಲಂಡನ್ನಲ್ಲಿ ನಡೆದ ಟೂರ್ನಿಯಲ್ಲಿ ಗೆದ್ದಿತ್ತು. ಇದಾದ ಬಳಿಕ 2010 ಮತ್ತು 2014ರಲ್ಲಿ ಸತತ 2 ಬಾರಿ ಟ್ರೋಫಿ ಗೆದ್ದಿದೆ. ಒಟ್ಟು ಮೂರು ಬಾರಿ ಚಾಂಪಿಯನ್ ಆಗಿದೆ. 2018ರ ವಿಶ್ವಕಪ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದೆ. ಈ ಬಾರಿಯೂ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.
ಭಾರತ
ಟೂರ್ನಿಯ ಆತಿಥೇಯ ದೇಶ ಭಾರತವೂ ಈ ಬಾರಿಯ ನೆಚ್ಚಿನ ತಂಡವಾಗಿದೆ. ಟೋಕಿಯೊ ಒಲಿಂಪಿಕ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ತೋರಿದ ಪ್ರದರ್ಶನವನ್ನು ಗಮನಿಸುವಾಗ ಭಾರತ ತಂಡವೂ ಫೈನಲ್‌ಗೇರುವ ವಿಶ್ವಾಸದಲ್ಲಿದೆ. ತವರಿನಲ್ಲೇ ಟೂರ್ನಿ ನಡೆಯುತ್ತಿರುವುದರಿಂದ ತವರಿನ ಲಾಭವೂ ಭಾರತಕ್ಕಿದೆ. 1975ರಲ್ಲಿ ಕೌಲಾಲಂಪುರದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಇದಾದ ಬಳಿಕ ಚಾಂಪಿಯನ್ ಆಗಿಲ್ಲ. 2018ರ ವಿಶ್ವಕಪ್‌ನಲ್ಲಿ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಭಾರತ ಗೆದ್ದರೆ 48 ವರ್ಷಗಳ ಬಳಿಕ ಚಾಂಪಿಯನ್ ಕಿರೀಟ ಅಲಂಕರಿಸಲಿದೆ.
ಜರ್ಮನಿ
2002 ಮತ್ತು 2006ರ ವಿಶ್ವ ಕಪ್ ಟೂರ್ನಿಯಲ್ಲಿ ಸತತ ಎರಡು ಬಾರಿ ಕಪ್ ಗೆದ್ದಿರುವ ಜರ್ಮನಿಯೂ ಈ ಕೂಟದ ಬಲಿಷ್ಠ ತಂಡಗಳಲ್ಲೊಂದು. ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನ ಪಡೆದಿರುವ ಜರ್ಮನಿ ಯಾವ ಹಂತದಲ್ಲಿಯೂ ತಿರುಗಿ ಬಿದ್ದು ಮೇಲುಗೈ ಸಾಧಿಸುವ ಸಾಮರ್ಥ್ಯ ಹೊಂದಿದೆ. 2021-22 ಪ್ರೊ ಲೀಗ್ ಹಾಕಿಯಲ್ಲಿ ತಂಡ 4ನೇ ಸ್ಥಾನ ಪಡೆದಿದೆ. 2018ರ ವಿಶ್ವಕಪ್‌ನಲ್ಲಿ ಈ ತಂಡ ಕ್ವಾರ್ಟರ್ ಫೈನಲ್‌ವರೆಗೆ ತಲುಪಿತ್ತು. ಇದೀಗ ಈ ಟೂರ್ನಿಯಲ್ಲಿ ಗೆದ್ದು ಮೂರನೇ ಬಾರಿ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ.
ನೆದರ್ಲೆಂಡ್ಸ್
3 ಬಾರಿಯ ವಿಶ್ವ ಕಪ್ ಚಾಂಪಿಯನ್ ನೆದರ್ಲೆಂಡ್ಸ್ ತಂಡವೂ ಈ ಬಾರಿಯ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. 2018ರ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದರೂ ಬೆಲ್ಜಿಯಂ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ದ್ವಿತೀಯ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಯಾವುದೇ ತಪ್ಪನ್ನು ಮಾಡದೆ ಚಾಂಪಿಯನ್ ಆಗುವ ಯೋಜನೆ ನೆದರ್ಲೆಂಡ್ಸ್ ತಂಡದ್ದಾಗಿದೆ.
ಇದನ್ನೂ ಓದಿ | Hockey World Cup | ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ಗೆ ಒತ್ತಡವಿದೆ; ಕೋಚ್ ಗ್ರಹಾಂ ರೀಡ್!