Site icon Vistara News

Hockey India: ಹಾಕಿ ಇಂಡಿಯಾಗೆ ಅತ್ಯುತ್ತಮ ಸಂಘಟಕ ರಾಷ್ಟ್ರ ಪ್ರಶಸ್ತಿ

Hockey India: Best Organizing Nation Award for Hockey India

Hockey India: Best Organizing Nation Award for Hockey India

ನವದೆಹಲಿ: ಹಾಕಿ ವಿಶ್ವ ಕಪ್​ ಟೂರ್ನಿಯನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ಕಾರಣಕ್ಕೆ ಏಷ್ಯನ್​ ಹಾಕಿ ಒಕ್ಕೂಟವೂ(Asian Hockey Federation) ಹಾಕಿ ಇಂಡಿಯಾಕ್ಕೆ(Hockey India) “ಅತ್ಯುತ್ತಮ ಸಂಘಟಕ ರಾಷ್ಟ್ರ” ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.

ಎಫ್‌ಐಎಚ್ ಒಡಿಶಾ ಹಾಕಿ ಪುರುಷರ ವಿಶ್ವಕಪ್ ಟೂರ್ನಿ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆದಿತ್ತು. ಈ ಕೂಟವನ್ನು ಅದ್ಭುತವಾಗಿ ನಿರ್ವಹಿಸಿದ್ದಕ್ಕಾಗಿ ಕೊರಿಯಾದ ಮುಂಗ್ಯೊಂಗ್‌ನಲ್ಲಿ ನಡೆದ ಎಎಚ್‌ಎಫ್ ಸಭೆಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಭಾರತದ ಆತಿಥ್ಯದಲ್ಲಿ ನಡೆದ 2ನೇ ಹಾಕಿ ವಿಶ್ವಕಪ್​ ಟೂರ್ನಿ ಇದಾಗಿತ್ತು. ಇದಕ್ಕೂ ಮುನ್ನ 2018ರಲ್ಲಿ ಭುವನೇಶ್ವರದ ಕಳಿಂಗ ಹಾಕಿ ಸ್ಟೇಡಿಯಂನಲ್ಲಿ ಟೂರ್ನಿ ನಡೆದಿತ್ತು. ಈ ಬಾರಿಯ ಟೂರ್ನಿಯಲ್ಲಿ ವಿಶ್ವದ 16 ತಂಡಗಳು ಭಾಗವಹಿಸಿದ್ದವು. ಭುವನೇಶ್ವರ ಮತ್ತು ರೂರ್ಕೆಲಾದ ಎರಡು ವಿಶ್ವ ದರ್ಜೆ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆದಿದ್ದವು. ರೂರ್ಕೆಲಾದಲ್ಲಿ ಹೊಸದಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಪಂದ್ಯಾಟವನ್ನು ಯೋಜಿಸಲಾಗಿತ್ತು.

ಇತ್ತೀಚೆಗಷ್ಟೇ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂಗೆ ಗಿನ್ನಿಸ್​ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌(Guinness Book Of World Records) ಪ್ರಶಸ್ತಿ ದೊರೆತ್ತಿತ್ತು. ವಿಶ್ವದ ಅತಿದೊಡ್ಡ ಸಂಪೂರ್ಣ ಕುಳಿತುಕೊಳ್ಳುವ ಹಾಕಿ ಕ್ರೀಡಾಂಗಣ ಎಂದು ಗುರುತಿಸುವ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗಿತ್ತು. ಇದೀಗ ಹಾಕಿ ಇಂಡಿಯಾಕ್ಕೆ ಮತ್ತೊಂದು ಪ್ರಶಸ್ತಿ ಗರಿ ಬಂದಿದೆ.

“ಏಷ್ಯನ್ ಹಾಕಿ ಫೆಡರೇಶನ್​ನಿಂದ ಸಿಕ್ಕ ಈ ಗೌರವದಿಂದ ಭಾರತದ ಹಾಕಿಯ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಈ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ತಂಡಗಳಿಗು, ಅಧಿಕಾರಿಗಳು ಹಾಗೂ ಟೂರ್ನಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದು ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ಟಿರ್ಕಿ ಹೇಳಿದ್ದಾರೆ.

ಇದನ್ನೂ ಓದಿ Hockey India: ಹಾರ್ದಿಕ್‌, ಸವಿತಾಗೆ ವರ್ಷದ ಹಾಕಿ ಆಟಗಾರ ಪ್ರಶಸ್ತಿ

“ನಿಖರತೆಯಿಂದ ಕೆಲಸ ಮಾಡಿದಾಗ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆದ ಎಫ್‌ಐಎಚ್ ಒಡಿಶಾ ಹಾಕಿ ಪುರುಷರ ವಿಶ್ವಕಪ್ ಟೂರ್ನಿಯೇ ಸಾಕ್ಷಿ. ಈ ಪ್ರಶಸ್ತಿ ಹಾಕಿ ಇಂಡಿಯಾದ ಸಿಬ್ಬಂದಿಗಳ ಕಠಿಣ ಪರಿಶ್ರಮಕ್ಕೆ ಸಲ್ಲುತ್ತದೆ. ಈ ಪ್ರಯತ್ನವನ್ನು ಗುರುತಿಸಿ ಗೌರವಿಸಿದ ಏಷ್ಯನ್ ಹಾಕಿ ಫೆಡರೇಶನ್​ಗೆ ಕೃತಜ್ಞತೆಗಳು” ಎಂದು ಭೋಲಾನಾಥ್ ಸಿಂಗ್ ಹೇಳಿದರು.

Exit mobile version