Site icon Vistara News

Hockey India: ಭಾರತ ಮಹಿಳಾ ಹಾಕಿ ತಂಡಕ್ಕೆ 22 ವರ್ಷದ ಸಲೀಮಾ ನೂತನ ನಾಯಕಿ

Hockey India

ನವದೆಹಲಿ: ಮುಂಬರುವ ಬೆಲ್ಜಿಯಂ ಮತ್ತು ಇಂಗ್ಲೆಂಡ್‌ ಲೆಗ್‌ನ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಗಾಗಿ ಭಾರತ ಮಹಿಳಾ ಹಾಕಿ(Hockey India) ತಂಡ ಪ್ರಕಟಗೊಂಡಿದೆ. ಜತೆಗೆ ನಾಯಕತ್ವದಲ್ಲಿಯೂ ಬದಲಾವಣೆ ಸಂಭವಿಸಿದೆ. ಅನುಭವಿ ಗೋಲ್‌ಕೀಪರ್‌ ಸವಿತಾ ಪುನಿಯಾ(Savita Punia) ಬದಲು 22 ವರ್ಷದ ಮಿಡ್‌ ಫೀಲ್ಡರ್‌ ಸಲೀಮಾ ಟೇಟೆ(Salima Tete) ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ನವನೀತ್‌ ಕೌರ್‌(Navneet Kaur) ಉಪನಾಯಕಿಯಾಗಿದ್ದಾರೆ.

ರಾಣಿ ರಾಮ್​ಪಾಲ್​ ಅನುಪಸ್ಥಿತಿಯಲ್ಲಿ ಕಳೆದ ಕೆಲ ವರ್ಷಗಳಿಂದ ಸವಿತಾ ಪುನಿಯಾ ಭಾರತ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ, ಇವರ ನಾಯಕತ್ವದಲ್ಲಿ ಭಾರತ ಒಲಿಂಪಿಕ್‌ ಅರ್ಹತಾ ಸುತ್ತಿನ ಸ್ಪರ್ಧೆ ಹಾಗೂ ತವರಿನ ಪ್ರೊ ಲೀಗ್‌ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಹೀಗಾಗಿ ಯುವ ಆಟಗಾರ್ತಿಗೆ ನಾಯಕತ್ವದ ಹೊಣೆ ನೀಡಲಾಗಿದೆ. ನಾಯಕತ್ವದಿಂದ ಮುಕ್ತರಾದರೂ ಕೂಡ ಸವಿತಾ ಪುನಿಯಾ ಪ್ರಧಾನ ಗೋಲ್​ ಕೀಪರ್ ಆಗಿ ತಂಡದಲ್ಲಿ ಮುಂದುವರಿದಿದ್ದಾರೆ.

ಸಲೀಮಾ ಟೇಟೆ ಇತ್ತೀಚೆಗಷ್ಟೇ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ನಾಯಕಿಯಾಗಿ ಅವರಿಗೆ ಎಫ್‌ಐಎಚ್‌ ಪ್ರೊ ಲೀಗ್‌ ಮೊದಲ ಅಗ್ನಿಪರೀಕ್ಷೆಯಾಗಿದೆ. ನಾಯಕತ್ವದ ಬದಲಾವಣೆ ಮಾತ್ರವಲ್ಲದೆ ಡಿಫೆಂಡರ್‌ ಗುರ್ಜಿತ್‌ ಕೌರ್‌, ಮಿಡ್‌ ಫೀಲ್ಡರ್‌ಗಳಾದ ಸೋನಿಕಾ, ನಿಶಾ, ಸ್ಟ್ರೈಕರ್‌ ಬ್ಯೂಟಿ ಡುಂಗ್‌ಡುಂಗ್‌ ಅವರನ್ನು ಈ ಟೂರ್ನಿಗೆ ಕೈಬಿಡಲಾಗಿದೆ. ಇವರ ಬದಲು ಮಹಿಮಾ ಚೌಧರಿ, ಮನೀಷಾ ಚೌಹಾಣ್‌, ಪ್ರೀತಿ ದುಬೆ ಮತ್ತು ದೀಪಿಕಾ ಸೊರೆಂಗ್‌ ಅವಕಾಶ ಪಡೆದಿದ್ದಾರೆ.

ಇದನ್ನೂ ಓದಿ Hockey India: ಹಾಕಿ ಇಂಡಿಯಾಗೆ ಅತ್ಯುತ್ತಮ ಸಂಘಟಕ ರಾಷ್ಟ್ರ ಪ್ರಶಸ್ತಿ

ಬೆಲ್ಜಿಯಂ ಆವೃತ್ತಿಯ ಪಂದ್ಯಗಳು ಮೇ 22ರಿಂದ ಮೇ 26ರ ತನಕ; ಇಂಗ್ಲೆಂಡ್‌ ಆವೃತ್ತಿಯ ಪಂದ್ಯಗಳು ಜೂನ್​ 1ರಿಂದ ಜೂನ್​ 9ರ ತನಕ ನಡೆಯಲಿದೆ. ಲಂಡನ್‌ನಲ್ಲಿ ಆಡಲಾಗುವ ಪಂದ್ಯಗಳಲ್ಲಿ ಗ್ರೇಟ್‌ ಬ್ರಿಟನ್‌ ಮತ್ತು ಜರ್ಮನಿ ವಿರುದ್ಧ ಭಾರತ ಸೆಣಸಲಿದೆ.

ಭಾರತ ತಂಡ

ಡಿಫೆಂಡರ್: ನಿಕ್ಕಿ ಪ್ರಧಾನ್‌, ಉದಿತಾ, ಇಶಿಕಾ ಚೌಧರಿ, ಮೋನಿಕಾ, ಜ್ಯೋತಿ ಛತ್ರಿ, ಮಹಿಮಾ ಚೌಧರಿ.

ಮಿಡ್‌ ಫೀಲ್ಡರ್: ಸಲೀಮಾ ಟೇಟೆ (ನಾಯಕಿ), ನವನೀತ್‌ ಕೌರ್‌ (ಉಪನಾಯಕಿ), ವೈಷ್ಣವಿ ವಿಠuಲ್‌ ಫಾಲ್ಕೆ, ನೇಹಾ, ಜ್ಯೋತಿ, ಬಲ್‌ಜೀತ್‌ ಕೌರ್‌, ಮನೀಷಾ ಚೌಹಾಣ್‌, ಲಾಲ್ರೆಮಿಯಾಮಿ.

ಫಾರ್ವರ್ಡ್ಸ್‌: ಮುಮ್ತಾಜ್‌ ಖಾನ್‌, ಸಂಗೀತಾ ಕುಮಾರಿ, ದೀಪಿಕಾ, ಶರ್ಮಿಳಾ ದೇವಿ, ಪ್ರೀತಿ ದುಬೆ, ವಂದನಾ ಕಟಾರಿಯಾ, ಸುನೇಲಿಟಾ ಟೋಪೊ, ದೀಪಿಕಾ ಸೊರೆಂಗ್‌.

ಗೋಲ್‌ಕೀಪರ್: ಸವಿತಾ ಪುನಿಯಾ, ಬಿಚು ದೇವಿ ಖರಿಬಾಮ್‌.

Exit mobile version