ಭುವನೇಶ್ವರ: ಹಾಕಿ ವಿಶ್ವಕಪ್ನ(Hockey World Cup 2023) ಕ್ರಾಸ್‌ಓವರ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಟ ನಡೆಸಲು ಸಜ್ಜಾಗಿದೆ. ಉಭಯ ತಂಡಗಳ ಈ ಮುಖಾಮುಖಿ ಭಾನುವಾರ(ಜ.22) ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ಕಳೆದ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಗೆದ್ದರೂ ಗೋಲ್ಗಳ ಅಂತರದಲ್ಲಿ ಇಂಗ್ಲೆಂಡ್ ತಂಡಕ್ಕಿಂತ ಹಿಂದೆ ಇದ್ದ ಕಾರಣ ಕ್ವಾರ್ಟರ್ಫೈನಲ್ಗೆ ನೇರ ಪ್ರವೇಶ ಗಳಿಸಲು ವಿಫಲವಾಗಿತ್ತು. ಇದರಿಂದಾಗಿ ಇಂಗ್ಲೆಂಡ್ ಅಗ್ರಸ್ಥಾನ ಪಡೆದು ಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು.
ಇದೀಗ ಭಾರತ ಕ್ವಾರ್ಟರ್ ಫೈನಲ್ ಪ್ರವೇಶದ ಮಹತ್ವದ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹರ್ಮನ್‌ಪ್ರೀತ್ ಸಿಂಗ್ ಪಡೆಗೆ ತವರಿನ ಲಾಭವಿದ್ದರೂ ಕಿವೀಸ್ ಸವಾಲನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಕಿವೀಸ್ ಶ್ರೇಷ್ಠ ಪ್ರದರ್ಶನ ತೋರಿತ್ತು. ಹೀಗಾಗಿ ಭಾರತ ಎಚ್ಚರಿಕೆಯಿಂದ ಆಡಬೇಕಿದೆ. ಜತೆಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಉಪಯುಕ್ತವಾಗಿ ಬಳಸಿಕೊಂಡು ಗೋಲು ಬಾರಿಸಬೇಕಿದೆ.
ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿ ಗೋಚರಿಸಿದೆ. ಇತ್ತಂಡಗಳು ಇದುವರೆಗೆ 44 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 24, ನ್ಯೂಜಿಲ್ಯಾಂಡ್ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 5 ಪಂದ್ಯಗಳು ಡ್ರಾ ಗೊಂಡಿವೆ. ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡದ ಸವಾಲು ಎದುರಾಗುವ ನಿರೀಕ್ಷೆಯಿದೆ.
ಪಂದ್ಯಆರಂಭ: ಸಂಜೆ 7 ಗಂಟೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಇದನ್ನೂ ಓದಿ | Hockey World Cup | ವೇಲ್ಸ್ ವಿರುದ್ಧ ಭಾರತ ತಂಡಕ್ಕೆ 4-2 ಜಯ; ಕ್ವಾರ್ಟರ್ಫೈನಲ್ಸ್ಗೆ ಸಿಗದ ನೇರ ಪ್ರವೇಶ