ಕಟಕ್, (ಒಡಿಶಾ): ಪ್ರತಿಷ್ಠಿತ ಪುರುಷರ ಎಫ್‌ಐಎಚ್ ಹಾಕಿ ವಿಶ್ವ ಕಪ್(Hockey World Cup) ಟೂರ್ನಿಗೆ ಬಾರಾಬತಿಯ ಸುಂದರ ಕ್ರೀಡಾಂಗಣದಲ್ಲಿ ಬುಧವಾರ ಅದ್ದೂರಿ ಚಾಲನೆ ಸಿಕ್ಕಿದೆ. ಈ ಉದ್ಘಾಟನಾ ಸಮಾರಂಭವನ್ನು ದೇಶ, ವಿದೇಶಗಳಿಂದ ಸಾವಿರಾರು ಹಾಕಿ ಪ್ರೇಮಿಗಳು ಕಣ್ತುಂಬಿಕೊಂಡರು.
ಒಡಿಶಾ ಸಿಎಂ ನವೀನ್ ಪಟ್ನಾಯಕ್, ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ನ ಅಧ್ಯಕ್ಷ ತಯ್ಯಬ್ ಇಕ್ರಮ್ ಮತ್ತು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದು ಕೂಟದಲ್ಲಿ ಭಾಗವಹಿಸುವ 16 ತಂಡಗಳ ಸದಸ್ಯರನ್ನು ಸ್ವಾಗತಿಸಿದರು.
ಸತತ ಎರಡನೇ ಬಾರಿ ಈ ಮಹಾನ್ ಕೂಟವನ್ನು ಆಯೋಜಿಸಿದ ಒಡಿಶಾ ರಾಜ್ಯವನ್ನು ಮುಕ್ತಕಂಠದಿಂದ ಹೊಗಳಿದ ಇಕ್ರಮ್ ಅವರು ರಾಜ್ಯವು ಹಾಕಿಯ ಭೂಮಿ ಎಂದು ಬಣ್ಣಿಸಿದರು. ಇದೇ ವೇಳೆ ಈ ಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಒಡಿಶಾ ಸರಕಾರಕ್ಕೆ ಕ್ರೀಡಾ ಸಚಿವ ಠಾಕೂರ್ ಧನ್ಯವಾದ ಸಲ್ಲಿಸಿದರು. ಇಂತಹ ಕೂಟಗಳನ್ನು ಆಯೋಜಿಸಲು ರಾಜ್ಯಗಳಿಗೆ ಕೇಂದ್ರವು ಯಾವಾಗಲೂ ಬೆಂಬಲವನ್ನು ನೀಡುತ್ತದೆ ಎಂದು ಈ ಸಂದರ್ಭ ಹೇಳಿದರು.
ಅದ್ಧೂರಿಯಾಗಿ ನಡೆದ ಈ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಸೇರಿದಂತೆ ಬಾಲಿವುಡ್‌ನ ನೂರಾರು ಗಾಯಕರು ಮತ್ತು ಸ್ಥಳೀಯ ಕಲಾವಿದರು ಹಾಕಿ ವಿಶ್ವಕಪ್ ಥೀಮ್ ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ 16 ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪಿಸಿ ಸಾವಿರಾರು ಹಾಕಿ ಪ್ರೇಮಿಗಳು ಮತ್ತು ಉತ್ಸಾಹಿಗಳಿಗೆ ದೊಡ್ಡ ಪರದೆಗಳ ಮೂಲಕ ಸಮಾರಂಭದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಟೂರ್ನಿಯ ಪಂದ್ಯಗಳು ಶುಕ್ರವಾರದಿಂದ ಆರಂಭವಾಗಲಿವೆ. ಜ. 13ರಂದು ಮೊದಲ ಪಂದ್ಯದಲ್ಲಿ ಭಾರತ ತಂಡ ಸ್ಪೇನ್ ವಿರುದ್ಧ ಆಡಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಅರ್ಜೆಂಟೀನಾ ಮುತ್ತು ದಕ್ಷಿಣ ಆಫ್ರಿಕಾ ಸೆಣಸಲಿವೆ.
ಭಾರತ ನೆಚ್ಚಿನ ತಂಡ
ಭಾರತವು ಹಾಕಿ ವಿಶ್ವಕಪ್ ಗೆಲ್ಲದೆ 48 ವರ್ಷಗಳು ಕಳೆದಿವೆ. 1975 ರಲ್ಲಿ ಕೌಲಾಲಂಪುರದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕೊನೆಯದಾಗಿ ಭಾರತ ಚಾಂಪಿಯನ್ ಆಗಿತ್ತು. ಈ ಬಳಿಕ ಭಾರತ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿಲ್ಲ. ಇದೀಗ ಈ ಟೂರ್ನಿಯಲ್ಲಿ ಭಾರತ ನೆಚ್ಚಿನ ತಂಡವಾಗಿದೆ. ಇಲ್ಲಿ ಗೆದ್ದು 48 ವರ್ಷಗಳ ಕಪ್ ಬರ ನೀಗಿಸಲು ಆಟಗಾರರು ಸಜ್ಜಾಗಿದ್ದಾರೆ.
ಇದನ್ನೂ ಓದಿ | Hockey World Cup | ಹಾಕಿ ವಿಶ್ವಕಪ್; ಭಾರತ ಪಂದ್ಯದ ಎಲ್ಲ ಟಿಕೆಟ್ ಸೋಲ್ಡ್‌ಔಟ್; ಹಾಕಿ ಇಂಡಿಯಾ ಮಾಹಿತಿ