ಭುವನೇಶ್ವರ: ಭಾರತದ ಆತಿಥ್ಯದಲ್ಲಿ ಜನವರಿ 13ರಿಂದ ಆರಂಭವಾಗಲಿರುವ ಪುರುಷರ ಹಾಕಿ ವಿಶ್ವ ಕಪ್ ಟೂರ್ನಿಯ(Hockey World Cup ) ಭಾರತದ ಎಲ್ಲ ಪಂದ್ಯಗಳ ಟಿಕೆಟ್ ಸೋಲ್ಡ್‌ಔಟ್ ಆಗಿದೆ ಎಂದು ಹಾಕಿ ಇಂಡಿಯಾ ಮಾಹಿತಿ ನೀಡಿದೆ.
ಭಾರತ ಟೂರ್ನಿಯಲ್ಲಿ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜನವರಿ 13ಕ್ಕೆ ಸ್ಪೇನ್ ಹಾಗೂ ಜನವರಿ 15ಕ್ಕೆ ಇಂಗ್ಲೆಂಡ್ ವಿರುದ್ಧ ರೂರ್ಕೆಲಾದ ನೂತನ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ. ಇದಾದ ಬಳಿಕ ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ಜನವರಿ 19ಕ್ಕೆ ವೇಲ್ಸ್ ವಿರುದ್ಧ ಆಡಲಿದೆ. ಈ ಮೂರೂ ಪಂದ್ಯಗಳ ಎಲ್ಲ ಟಿಕೆಟ್‌ಗಳು ಮಾರಾಟವಾಗಿದೆ. ಜತೆಗೆ ಇತರೆ ಪಂದ್ಯಗಳ ಟಿಕೆಟ್‌ಗಳಿಗೂ ಭಾರಿ ಬೇಡಿಕೆ ಕಂಡುಬರುತ್ತಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
ಈಗಾಗಲೇ ರೂರ್ಕೆಲಾದ ಕ್ರೀಡಾಂಗಣದ ಎಲ್ಲ 20 ಪಂದ್ಯಗಳ ಟಿಕೆಟ್ ಮಾರಾಟಕ್ಕಿಟ್ಟ ಕೆಲವೇ ದಿನಗಳಲ್ಲಿ ಸೋಲ್ಡ್‌ಔಟ್ ಆಗಿದೆ. ಒಟ್ಟಾರೆ ಭಾರತದಲ್ಲಿ ಹಾಕಿ ಕ್ರೀಡೆ ಕ್ರಿಕೆಟ್ನಂತೆ ಪ್ರಸಿದ್ಧಿ ಹೊಂದಲಾರಂಭಿಸಿದೆ. ಭಾರತವು ಹಾಕಿ ವಿಶ್ವಕಪ್ ಗೆಲ್ಲದೆ 48 ವರ್ಷಗಳು ಕಳೆದಿವೆ. 1975 ರಲ್ಲಿ ಕೌಲಾಲಂಪುರದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕೊನೆಯದಾಗಿ ಭಾರತ ಚಾಂಪಿಯನ್ ಆಗಿತ್ತು. ಆದರೆ ಈ ಬಾರಿ ಟೂರ್ನಿಯಲ್ಲಿ ಭಾರತ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದ್ದು 48 ವರ್ಷಗಳ ಕಪ್ ಬರ ನೀಗಿಸಲು ಆಟಗಾರರು ಸಜ್ಜಾಗಿದ್ದಾರೆ.
ಇದನ್ನೂ ಓದಿ | Hockey World Cup | ಈ ಬಾರಿ ಭಾರತ ಹಾಕಿ ವಿಶ್ವ ಕಪ್ ಗೆಲ್ಲಲಿದೆ; ಪಿ.ಆರ್.ಶ್ರೀಜೇಶ್ ವಿಶ್ವಾಸ