Site icon Vistara News

Hockey World Cup | ಹಾಕಿ ವಿಶ್ವ ಕಪ್​; ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Hockey World Cup

ರೂರ್ಕೆಲಾ: ಹಾಕಿ ವಿಶ್ವಕಪ್‌ ಟೂರ್ನಿಯ(Hockey World Cup) ಮೊದಲ ಪಂದ್ಯದಲ್ಲಿ ಸ್ಪೇನ್​ ವಿರುದ್ಧ ಗೆದ್ದು ಶುಭಾರಂಭ ಕಂಡಿರುವ ಭಾರತ ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಭಾನುವಾರ ಬಲಿಷ್ಠ ಇಂಗ್ಲೆಂಡ್ ತಂಡದ ಸವಾಲು ಎದುರಾಗಿದೆ.

ಭಾರತ ಕಳೆದ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ತೋರಿದ ಅದೇ ಲಯವನ್ನು ಮುಂದುವರಿಸುವ ತವಕದಲ್ಲಿದೆ. ಆದರೆ ಪೆನಾಲ್ಟಿ ಕಾರ್ನರ್​ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಕಳೆದ ಪಂದ್ಯದಲ್ಲಿ ಹಲವು ಪೆನಾಲ್ಟಿ ಕಾರ್ನರ್ ಸಿಕ್ಕರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಆಟಗಾರರು ಎಡವಿದ್ದರು. ಉಳಿದಂತೆ ಎಲ್ಲ ವಿಭಾಗದಲ್ಲಿಯೂ ಭಾರತ ಬಲಿಷ್ಠವಾಗಿದೆ.

ಇಂಗ್ಲೆಂಡ್‌ನ ಗೋಲ್‌ಕೀಪರ್ ಆಲಿವರ್ ಪೇನ್‌ ಭದ್ರಕೋಟೆಯನ್ನು ಕಡೆವಿದರೆ ಭಾರತಕ್ಕೆ ಗೆಲುವು ಖಚಿತ. ಆದರೆ ಅವರ ಕಣ್ಣು ತಪ್ಪಿಸಿ ಗೋಲು ಬಾರಿಸುವುದು ಅಷ್ಟು ಸುಲಭವಲ್ಲ. ಕಳೆದ ವೇಲ್ಸ್ ಎದುರಿನ ಪಂದ್ಯದಲ್ಲಿ ಎದುರಾಳಿಯ ಪ್ರಯತ್ನಗಳನ್ನು ವಿಫಲಗೊಳಿಸಿದ್ದು ಇದಕ್ಕೆ ಉತ್ತಮ ನಿದರ್ಶನ. ಆದ್ದರಿಂದ ಅವರ ಸವಾಲು ಮೀರಿ ಭಾರತದ ಆಟಗಾರರು ಚೆಂಡನ್ನು ಚಾಣಕ್ಷತೆಯಿಂದ ಗೋಲು ಪೆಟ್ಟಿಗೆಗೆ ಹೊಡೆಯಬೇಕಿದೆ.

ಬಲಾಬಲದ ಆಧಾರದಲ್ಲಿ ನೋಡುವುದಾದರೆ ಭಾರತ ಬಲಿಷ್ಠವಾಗಿ ಗೋಚರಿಸಿದೆ. ಕಳೆದ ವರ್ಷ ಉಭಯ ತಂಡಗಳು ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಎರಡು ಡ್ರಾ ಆಗಿದ್ದರೆ, ಒಂದರಲ್ಲಿ ಭಾರತ ಜಯ ಸಾಧಿಸಿತ್ತು. ಆದ್ದರಿಂದ ಈ ಪಂದ್ಯದಲ್ಲಿಯೂ ಭಾರತ ನೆಚ್ಚಿನ ತಂಡ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ | Hockey World Cup | ಹಾಕಿ ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ; ಸ್ಪೇನ್ ವಿರುದ್ಧ 2-0 ಗೆಲುವು

Exit mobile version