Site icon Vistara News

Hockey World Cup | ಹಾಕಿ ವಿಶ್ವ ಕಪ್​ ಗೆದ್ದರೆ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ; ಸಿಎಂ ಪಟ್ನಾಯಕ್‌

naveen patnaik

ಭುವನೇಶ್ವರ: ಭಾರತದ ಆತಿಥ್ಯದಲ್ಲಿ ನಡೆಯುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದರೆ ತಂಡದ ಆಟಗಾರರಿಗೆ ತಲಾ 1 ಕೋಟಿ ನಗದು ಬಹುಮಾನ ನೀಡಲಾಗುವುದು ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಘೋಷಿಸಿದ್ದಾರೆ.

ಗುರುವಾರ ವಿಶ್ವ ಕಪ್‌ ಟೂರ್ನಿಯ ಪಂದ್ಯಗಳು ನಡೆಯುವ ರೂರ್ಕೆಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿಸಿರುವ ‘ವಿಶ್ವ ಕಪ್‌ ಗ್ರಾಮ’ ಉದ್ಘಾಟಿಸಿ ಈ ಬಹುಮಾನ ಘೋಷಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು “ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳುವ ವಿವಿಧ ದೇಶಗಳ ಆಟಗಾರರ ವಾಸ್ತವ್ಯಕ್ಕೆ ‘ವಿಶ್ವಕಪ್‌ ಗ್ರಾಮ’ವನ್ನು ದಾಖಲೆಯ 9 ತಿಂಗಳಲ್ಲಿ ನಿರ್ಮಿಸಲಾಗಿದೆ. 225 ಕೊಠಡಿಗಳು ಒಳಗೊಂಡಂತೆ ಎಲ್ಲ ಸೌಲಭ್ಯಗಳು ಇಲ್ಲಿವೆ” ಎಂದು ಮಾಹಿತಿ ನೀಡಿದರು.

“ನಮ್ಮ ತಂಡ ವಿಶ್ವ ಕಪ್‌ ಗೆದ್ದರೆ ಎಲ್ಲ ಆಟಗಾರರಿಗೆ ತಲಾ ಒಂದು ಕೋಟಿ ನಗದು ಬಹುಮಾನ ನೀಡಲಾಗುವುದು. ಭಾರತ ತಂಡ ಉತ್ತಮ ಆಟವಾಡಲಿ. ಮುಂದಿನ ಒಲಿಂಪಿಕ್ಸ್​ಗೆ ಈ ಟೂರ್ನಿಯೇ ಭಾರತದ ಗೆಲುವಿನ ಮೆಟ್ಟಿಲಾಗಲಿ” ಎಂದು ಪಟ್ನಾಯಕ್‌ ಶುಭಹಾರೈಸಿದ್ದಾರೆ.

ಹಾಕಿ ಇಂಡಿಯಾದಿಂದಲೂ ಭರ್ಜರಿ ಬಹುಮಾನ ಘೋಷಣೆ

ಇದಕ್ಕೂ ಮುನ್ನ ಹಾಕಿ ಇಂಡಿಯಾ ಕೂಡಾ ವಿಶ್ವ ಕಪ್‌ ಗೆದ್ದರೆ ಆಟಗಾರರಿಗೆ ತಲಾ 25 ಲಕ್ಷ ಮತ್ತು ನೆರವು ಸಿಬ್ಬಂದಿಗೆ ತಲಾ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿತ್ತು. ವಿಶ್ವ ಕಪ್‌ ಟೂರ್ನಿ ಇದೇ ತಿಂಗಳ 13 ರಿಂದ 29ರ ವರೆಗೆ ನಡೆಯಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಸ್ಪೇನ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

1975ರ ಆವೃತ್ತಿಯಲ್ಲಿ ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಮಣಿಸಿ ಚಿನ್ನದ ಪದಕ ಜಯಿಸಿತ್ತು. ಬಳಿಕ 1971ರಲ್ಲಿ ಕಂಚು ಮತ್ತು 1973ರಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು. ಈ ಬಳಿಕ ಭಾರತ ಯಾವುದೇ ಪದಕ ಜಯಿಸಿಲ್ಲ.

ಇದನ್ನೂ ಓದಿ | Hockey World Cup | ಎಫ್‌ಐಎಚ್‌ ಪುರುಷರ ಹಾಕಿ ವಿಶ್ವ ಕಪ್​ಗೆ ಪೂರ್ಣ ಸಜ್ಜಾದ ಒಡಿಶಾ; ದಿನಗಣನೆ ಆರಂಭ

Exit mobile version