ರೂರ್ಕೆಲಾ: 15ನೇ ಆವೃತ್ತಿಯ ಪುರುಷರ ಎಫ್‌ಐಎಚ್ ಹಾಕಿ ವಿಶ್ವ ಕಪ್(Hockey World Cup) ಟೂರ್ನಿಯಲ್ಲಿ ಆತಿಥೇಯ ಭಾರತ ತಂಡ ಗೆಲುವಿನ ಶುಭಾರಂಭ ಮಾಡಿದೆ. ಬಲಿಷ್ಠ ಸ್ಪೇನ್ ವಿರುದ್ಧ 2-0 ಅಂತರದ ಗೋಲ್ಗಳಿಂದ ಗೆದ್ದು ಬೀಗಿದೆ.
ಒಡಿಶಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಎಲ್ಲ ವಿಭಾಗದಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಎದುರಾಳಿ ಸ್ಪೇನ್ ತಂಡವನ್ನು ಬಗ್ಗು ಬಡಿಯುವಲ್ಲಿ ಯಶಸ್ಸು ಕಂಡಿದೆ. ಪಂದ್ಯ ಆರಂಭದ 12ನೇ ನಿಮಿಷದಲ್ಲಿ ಡಿಫೆಂಡರ್ ಅಮಿತ್ ರೋಹಿದಾಸ್ ಮೊದಲ ಗೋಲ್ ಬಾರಿಸಿ ತಂಡದ ಖಾತೆ ತೆರೆದರು.
ಇದೇ ಆಕ್ರಮಣಕಾರಿ ಆಟ ಮುಂದುವರಿಸಿದ ಭಾರತ 26ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಬಾರಿಸಿ 2-0 ಮುನ್ನಡೆ ಸಾಧಿಸಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು. ಈ ಗೋಲ್ ಮಿಡ್-ಫೀಲ್ಡ್ ಸ್ಟಾರ್ ಹಾರ್ದಿಕ್ ಸಿಂಗ್ ಹೊಡೆದರು. ಮುನ್ನಡೆ ಸಾಧಿಸಿದ ಬಳಿಕ ಭಾರತ ಆಟಗಾರರು ಉಳಿದ ಮೂರು ಕಾರ್ಟರ್ನಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಅಂತಿಮವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿದರು.
ಪಂದ್ಯದ ಅಂತಿಮ ಹಂತದಲ್ಲಿ ಅಭಿಷೇಕ್ ಹಳದಿ ಕಾರ್ಡ್ ಪಡೆದು ಭಾರತದ ಆತಂಕ ಹೆಚ್ಚಿಸಿದರು. ಹೀಗಾಗಿ ಭಾರತ 10 ಮಂದಿಯೊಂದಿಗೆ ಹೋರಾಟ ನಡೆಸಿತ್ತು. ಇದೇ ವೇಳೆ ಸ್ಪೇನ್ಗೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಭಾರತದ ಆಕ್ರಮಣಕಾರಿ ಆಟದ ಮುಂದೆ ಸ್ಪೇನ್ ಆಟಗಾರರು ಯಾವುದೇ ಹಂತದಲ್ಲಿಯೂ ತಿರುಗಿಬೀಳಲಾಗದೆ ಸೋಲೊಪ್ಪಿಕೊಂಡರು.
ಭಾರತ ಮುಂದಿನ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ ಈ ಪಂದ್ಯ ಜನವರಿ 15 ರಂದು ರೂರ್ಕೆಲದಲ್ಲಿ ನಡೆಯಲಿದೆ.
ಇದನ್ನೂ ಓದಿ | Hockey India | ಹಾಕಿ ವಿಶ್ವಕಪ್ ಗೆಲ್ಲುವ ನೆಚ್ಚಿನ 5 ತಂಡಗಳು ಯಾವವು? ಇಲ್ಲಿದೆ ಸಂಪೂರ್ಣ ಮಾಹಿತಿ