ಭುವನೇಶ್ವರ: ಈಗಾಗಲೇ ಹಾಕಿ ವಿಶ್ವ ಕಪ್(Hockey World Cup) ಟೂರ್ನಿಯ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿರುವ ಆತಿಥೇಯ ಭಾರತ ತಂಡ 9ರಿಂದ 16ನೇ ಸ್ಥಾನದ ಸ್ಪರ್ಧೆಗೆ ಸಜ್ಜಾಗಿದೆ. ಗುರುವಾರ ಜಪಾನ್ ವಿರುದ್ಧ ಮುಖಾಮುಖಿಯಾಗಲಿದೆ.
ವಿಶ್ವಕಪ್ ಹಾಕಿ ಕೂಟದ ಆತಿಥೇಯ ರಾಷ್ಟ್ರವಾಗಿದ್ದೂ ಕನಿಷ್ಠ ಕ್ವಾರ್ಟರ್ ಫೈನಲ್ ಕೂಡ ತಲುಪಲಾಗದೆ ವೈಫಲ್ಯ ಕಂಡ ಹರ್ಮನ್‌ಪ್ರೀತ್ ಪಡೆ ಇಲ್ಲಾದರೂ ಗೆದ್ದು ತವರಿನ ಹಾಕಿ ಅಭಿಮಾನಿಗಳನ್ನು ಸಮಾಧಾನ ಪಡಿಸುವ ಯೋಜನೆಯಲ್ಲಿದೆ. ಒಂದೊಮ್ಮೆ ಭಾರತ ಈ ಪಂದ್ಯದಲ್ಲೂ ಸೋತರೆ ತನ್ನ ವಿಶ್ವ ಕಪ್ ಚರಿತ್ರೆಯಲ್ಲೇ ಅತ್ಯಂಕ ಕೆಳಗಿನ ಸ್ಥಾನಕ್ಕೆ ಕುಸಿಯುವ ಸಂಕಟಕ್ಕೆ ಸಿಲುಕಲಿದೆ. ಸೋಲಿನ ಬಳಿಕ 13ರಿಂದ 16ನೇ ಸ್ಥಾನಕ್ಕಾಗಿ ಮತ್ತೊಂದು ಪಂದ್ಯವನ್ನು ಆಡಬೇಕಾಗುತ್ತದೆ.
ಭಾರತ ಹಾಕಿ ವಿಶ್ವ ಕಪ್ ಇತಿಹಾಸದಲ್ಲಿ ಒಮ್ಮೆಯೂ 12 ಸ್ಥಾನಕ್ಕಿಂತ ಕೆಳಗಿನ ಸ್ಥಾನಕ್ಕೆ ಕುಸಿದಿಲ್ಲ. 1986ರ ಲಂಡನ್ನಲ್ಲಿ ನಡೆದ ವಿಶ್ವ ಕಪ್ ಟೂರ್ನಿಯಲ್ಲಿ 12ನೇ ಸ್ಥಾನಕ್ಕೆ ಕುಸಿದಿತ್ತು. ಅಂದಿನ ಕೂಟದಲ್ಲಿ ಹನ್ನೆರಡೇ ತಂಡಗಳು ಪಾಲ್ಗೊಂಡಿದ್ದರಿಂದ ಇದು ಕಟ್ಟ ಕಡೆಯ ಸ್ಥಾನವೂ ಆಗಿತ್ತು. ಆದರೆ ಈ ಬಾರಿ 16 ತಂಡಗಳು ಸೆಣಸುತ್ತಿವೆ.
ಭಾರತ ಕಳೆದ ಕಾರ್ಟರ್ ಫೈನಲ್ ಪ್ರವೇಶದ ಮಹತ್ವದ ಕ್ರಾಸ್ ಓವರ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಶೂಟೌಟ್ನಲ್ಲಿ 4-5 ಗೋಲ್ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಈ ಮೂಲಕ 48 ವರ್ಷಗಳ ಬಳಿಕ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು.
ಇದನ್ನೂ ಓದಿ| Hockey World Cup: ಹಾಕಿ ವಿಶ್ವ ಕಪ್; ನ್ಯೂಜಿಲ್ಯಾಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದ ಭಾರತ