ಭುವನೇಶ್ವರ: ಹಾಕಿ ವಿಶ್ವ ಕಪ್ನ(Hockey World Cup) ಕ್ವಾರ್ಟರ್ ಫೈನಲ್ ಪ್ರವೇಶದ ಮಹತ್ವದ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಶೂಟೌಟ್ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಭಾರತದ 48 ವರ್ಷಗಳ ಬಳಿಕ ಕಪ್ ಗೆಲ್ಲುವ ಕನಸು ನುಚ್ಚುನೂರಾಗಿದೆ.
ಭಾನುವಾರ ಕಳಿಂಗ ಹಾಕಿ ಸ್ಟೇಡಿಯಂನಲ್ಲಿ ನಡೆದ ಕ್ರಾಸ್ಓವರ್ ಪಂದ್ಯದಲ್ಲಿ ಭಾರತ ತಂಡ ಶೂಟೌಟ್ನಲ್ಲಿ 5-4 ಗೋಲ್ಗಳ ಅಂತರದಿಂದ ಪರಾಭವಗೊಂಡಿತು. ನಾಲ್ಕು ಕ್ವಾರ್ಟರ್ಗಳ ಅವಧಿಯ ಆಟದಲ್ಲಿ ಉಭಯ ತಂಡಗಳು ತಲಾ ಮೂರು ಗೋಲು ಹೊಡೆದು ಸಮಬಲ ಸಾಧಿಸಿತು. ಹೀಗಾಗಿ ಪಂದ್ಯದ ವಿಜೇತರನ್ನು ನಿರ್ಧರಿಸಲು ಶೂಟೌಟ್ ಮೊರೆ ಹೋಗಲಾಯಿತು. ಆದರೆ ಭಾರತ ಇಲ್ಲಿ ಯಶಸ್ಸು ಸಾಧಿಸಲು ವಿಫಲಗೊಂಡು ಟೂರ್ನಿಯಿಂದ ಹೊರಬಿದ್ದಿತು. 2018ರ ವಿಶ್ವಕಪ್‌ನಲ್ಲಿ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಆದರೆ ಈ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶವೂ ಪಡೆಯಲಿಲ್ಲ.
ಉಭಯ ತಂಡಗಳ ಈ ಹೋರಾಟ ಅಂತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಪಂದ್ಯದ ಮೂರನೇ ಕ್ವಾರ್ಟರ್ ತನಕ ಭಾರತ 3-1 ಮುನ್ನಡೆ ಕಾಯ್ದುಕೊಂಡು ಗೆಲ್ಲುವ ಸೂಚನೆ ನೀಡಿತ್ತು. ಆದರೆ ನಾಲ್ಕನೇ ಕಾರ್ಟರ್ನ ಮಧ್ಯ ಭಾಗದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ನ್ಯೂಜಿಲ್ಯಾಂಡ್ ಭಾರತದ ಭದ್ರ ರಕ್ಷಣಾ ಕೋಟೆಯನ್ನು ಭೇದಿಸಿ ಸತತ ಗೋಲ್ ಬಾರಿಸುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿತು.
ಅಂತಿಮ ಕ್ಷಣದಲ್ಲಿ ಭಾರತೀಯ ಡಿಫೆಂಡರ್ಗಳು ಮಾಡಿದ ಎಡವಟ್ಟಿನಿಂದ ಎದುರಾಳಿಗಳಿಗೆ ಗೋಲ್ ಬಾರಿಸುವ ಸುವರ್ಣ ಅವಕಾಶ ಲಭಿಸಿತು. ಜತೆಗೆ ಗೋಲ್ ಕೀಪರ್ ಶ್ರೀಜೇಶ್ ಅವರು ಶೂಟೌಟ್ ವೇಳೆ ಮೊಣಕಾಲಿಗೆ ಗಾಯಗೊಂಡಿದ್ದೂ ಕೂಡ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಇದರ ಜತೆಗೆ ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಅವರ ಅನುಪಸ್ಥಿತಿ ಭಾರತಕ್ಕೆ ದೊಡ್ಡ ಹೊಡೆತ ನೀಡಿತು.
ಇದನ್ನೂ ಓದಿ | Hockey World Cup | ವೇಲ್ಸ್ ವಿರುದ್ಧ ಭಾರತ ತಂಡಕ್ಕೆ 4-2 ಜಯ; ಕ್ವಾರ್ಟರ್ಫೈನಲ್ಸ್ಗೆ ಸಿಗದ ನೇರ ಪ್ರವೇಶ