ಭುವನೇಶ್ವರ: ಬಹುನಿರೀಕ್ಷಿತ ಎಫ್‌ಐಎಚ್ ಪುರುಷರ ಹಾಕಿ ವಿಶ್ವ ಕಪ್(Hockey World Cup) ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಜನವರಿ 13ರಿಂದ 29ರವರೆಗೆ ಒಡಿಶಾದಲ್ಲಿ ಈ ಟೂರ್ನಿ ಜರುಗಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಒಡಿಶಾ ಸರ್ವ ಸನ್ನದ್ಧವಾಗಿದೆ. ಭುವನೇಶ್ವರ ಹಾಗೂ ರೂರ್ಕೆಲಾದಲ್ಲಿ ನಡೆಯುವ ಈ ಹಾಕಿ ವಿಶ್ವ ಸಮರವನ್ನು ಕಣ್ತುಂಬಿಕೊಳ್ಳಲು ಹಾಕಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಟೂರ್ನಿಯ ಆತಿಥ್ಯ ವಹಿಸಿದ ಒಡಿಶಾ ಸರ್ಕಾರ ಸಿದ್ಧತೆಯ ಬಗ್ಗೆ ಮಾಹಿತಿ ನೀಡಿದೆ. ಹಾಕಿ ವಿಶ್ವ ಕಪ್ ಟೂರ್ನಿಯನ್ನು ಅದ್ಧೂರಿಯಾಗಿ ಆಯೋಜಿಸಲು ಯಾವುದೇ ಸಮಸ್ಯೆಯಿಲ್ಲ. ಟೂರ್ನಿ ಅತ್ಯಂತ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ ಎಂದು ತಿಳಿಸಿದೆ.
ಭಾರತದ ಅತಿ ದೊಡ್ಡ ಹಾಕಿ ಕ್ರೀಡಾಂಗಣ
ರೂರ್ಕೆಲಾದಲ್ಲಿ ನೂತನವಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಕ್ರೀಡಾಂಗಣ 22 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನಿಸಿಕೊಂಡಿದೆ. ಈ ಸ್ಟೇಡಿಯಂ ಕೇವಲ ಒಂದು ವರ್ಷದ ಅವಧಿಯಲ್ಲಿ ನಿರ್ಮಿಸಿದ್ದು ನಿಜಕ್ಕೂ ಸವಾಲಾಗಿತ್ತು. ಸಾಕಷ್ಟು ಸವಾಲುಗಳನ್ನು ಎದುರಿಸಿ ನಾವು ಈ ಗುರಿಯನ್ನು ತಲುಪಿದ್ದೇವೆ ಎನ್ನಲು ಸಂತಸ ಪಡುತ್ತೇವೆ. 16 ರಾಷ್ಟ್ರಗಳು ಪಾಲ್ಗೊಳ್ಳುವ ಈ ಟೂರ್ನಿಯಲ್ಲಿ, ದಿನವೊಂದಕ್ಕೆ 4 ಪಂದ್ಯಗಳನ್ನು ಇಲ್ಲಿ ಆಯೋಜಿಸಲು ತೀರ್ಮಾನಿಸಿದ್ದೇವೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಸುರೇಶ್ ಮೊಹಪಾತ್ರ ತಿಳಿಸಿದ್ದಾರೆ.
200 ಮಂದಿ ಅಂತಾರಾಷ್ಟ್ರೀಯ ಗಣ್ಯರಿಗೆ ವಸತಿ ವ್ಯವಸ್ಥೆ
ಟೂರ್ನಿಯಲ್ಲಿ ಪಾಲ್ಗೊಳ್ಳುವ 150ರಿಂದ 200 ಮಂದಿ ಅಂತಾರಾಷ್ಟ್ರೀಯ ಗಣ್ಯ ವ್ಯಕ್ತಿಗಳಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಕಲ್ಪಿಸುವುದು ನಮ್ಮ ಪಾಲಿಗೆ ಸವಾಲಿನ ವಿಚಾರವಾಗಿತ್ತು. ಆದರೆ ಈ ಜವಾಬ್ದಾರಿಯನ್ನು ಇದೀಗ ತಾಜ್ ಗ್ರೂಪ್‌ನವರು ವಹಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಹಾಕಿ ವಿಶ್ವ ಕಪ್ ಟೂರ್ನಿಯು ರೂರ್ಕೆಲಾದಲ್ಲಿ ಜರುಗುತ್ತಿರುವುದರಿಂದ ಸ್ಥಳೀಯ ಹಾಕಿ ಅಭಿಮಾನಿಗಳು ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ನಾವು ಒದಗಿಸಲಿದ್ದೇವೆ ಎಂದು ಸುರೇಶ್ ಮೊಹಪಾತ್ರ ಹೇಳಿದ್ದಾರೆ.
ಇದನ್ನೂ ಓದಿ | Hockey World Cup | ಹಾಕಿ ವಿಶ್ವ ಕಪ್ ಗೆದ್ದರೆ ಆಟಗಾರರಿಗೆ ಸಿಗಲಿದೆ ತಲಾ 25 ಲಕ್ಷ ರೂ. ಬಹುಮಾನ; ಹಾಕಿ ಇಂಡಿಯಾ ಘೋಷಣೆ