Site icon Vistara News

Hockey World Cup | ಹಾಕಿ ವಿಶ್ವ ಕಪ್​ ಗೆದ್ದರೆ ಆಟಗಾರರಿಗೆ ಸಿಗಲಿದೆ ತಲಾ 25 ಲಕ್ಷ ರೂ. ಬಹುಮಾನ; ಹಾಕಿ ಇಂಡಿಯಾ ಘೋಷಣೆ

hockey world cup 2023

ನವದೆಹಲಿ: ಜನವರಿ 13ರಿಂದ(2023) ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವ ಕಪ್​(Hockey World Cup) ನಲ್ಲಿ ಭಾರತ ತಂಡ ಚಿನ್ನ ಗೆದ್ದರೆ, ಆಟಗಾರರಿಗೆ ಭರ್ಜರಿ ಮೊತ್ತದ ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ ಘೋಷಿಸಿದೆ.‌

“ಪುರುಷರ ಹಾಕಿ ವಿಶ್ವ ಕಪ್ ಟೂರ್ನಿಯಲ್ಲಿ ಭಾರತ ಚಿನ್ನದ ಪದಕ ಗೆದ್ದರೆ ತಂಡದ ಆಟಗಾರರಿಗೆ ತಲಾ 25 ಲಕ್ಷ ಮತ್ತು ನೆರವು ಸಿಬ್ಬಂದಿಗೆ ತಲಾ 5 ಲಕ್ಷ ರೂ ಬಹುಮಾನ ನೀಡಲಾಗುವುದು” ಎಂದು ಬುಧವಾರ ಹಾಕಿ ಇಂಡಿಯಾ ಪ್ರಕಟಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಸ್ಪೇನ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ಬಹುಮಾನದ ವಿವರ

ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದರೆ ಆಟಗಾರರಿಗೆ ತಲಾ 15 ಲಕ್ಷ ಮತ್ತು ನೆರವು ಸಿಬ್ಬಂದಿಗೆ 3 ಲಕ್ಷ, ಕಂಚು ಗೆದ್ದರೆ 10 ಲಕ್ಷ ಮತ್ತು ನೆರವು ಸಿಬ್ಬಂದಿಗೆ 2 ಲಕ್ಷ ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ ತಿಳಿಸಿದೆ.

“ಭಾರತ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್​ ಬಳಿಕ ಎಲ್ಲ ಟೂರ್ನಿಯಲ್ಲಿಯೂ ಉತ್ತಮ ಪ್ರದರ್ಶನ ತೋರಿದೆ. ಕಳೆದ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿಯೂ ಅಮೋಘ ಪ್ರದರ್ಶನ ತೋರಿತ್ತು. ಅದರಂತೆ ವಿಶ್ವ ಕಪ್​ ನಲ್ಲಿಯೂ ಶ್ರೇಷ್ಠ ಆಟವಾಡುವ ನಂಬಿಕೆ ಇದೆ. ಜತೆಗೆ ಈ ಬಹುಮಾನ ಘೋಷಣೆಯು ಆಟಗಾರರನ್ನು ಗೆಲುವಿಗೆ ಇನ್ನಷ್ಟು ಪ್ರೇರೇಪಿಸಲಿದೆ” ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ ತಿಳಿಸಿದ್ದಾರೆ.

1975ರ ಆವೃತ್ತಿಯಲ್ಲಿ ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಮಣಿಸಿ ಚಿನ್ನದ ಪದಕ ಜಯಿಸಿತ್ತು. ಬಳಿಕ 1971ರಲ್ಲಿ ಕಂಚು ಮತ್ತು 1973ರಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು. ಈ ಬಳಿಕ ಭಾರತ ಯಾವುದೇ ಪದಕ ಜಯಿಸಿಲ್ಲ.

ಇದನ್ನೂ ಓದಿ | Indian Men’s Hockey | ಆಸ್ಟ್ರೇಲಿಯಾ ಪ್ರವಾಸಕ್ಕೆ 23 ಸದಸ್ಯರ ಭಾರತ ಹಾಕಿ ತಂಡ ಪ್ರಕಟ

Exit mobile version