ಭುವನೇಶ್ವರ: ಭಾರತದ ಆತಿಥ್ಯದಲ್ಲಿ ನಡೆಯುವ ಎಫ್‌ಐಎಚ್ ಹಾಕಿ ವಿಶ್ವಕಪ್(Hockey World Cup) ಟೂರ್ನಿಯಲ್ಲಿ ಭಾರತ ತಂಡ ಈ ಬಾರಿ ಜಯಿಸುವ ವಿಶ್ವಾಸವಿದೆ ಎಂದು ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಹೇಳಿದ್ದಾರೆ. ಈ ಟೂರ್ನಿ ಜನವರಿ 13 ರಿಂದ ಆರಂಭವಾಗಲಿದೆ.
ಹಾಕಿ ವಿಶ್ವ ಕಪ್ ಅನುಭವದ ಬಗ್ಗೆ ಮಂಗಳವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರೀಜೇಶ್, 2018 ರಲ್ಲಿ ನಮಗೆ ಸೆಮಿಫೈನಲ್ ಪ್ರವೇಶಿಸಲು ಆಗಿರಲಿಲ್ಲ. ಕಳೆದ ಬಾರಿ ನೀಡಿದ್ದ ಪ್ರದರ್ಶನವನ್ನು ಉತ್ತಮಪಡಿಸುವ ಮತ್ತೊಂದು ಅವಕಾಶ ನಮಗೆ ಲಭಿಸಿದೆ. ಒಲಿಂಪಿಕ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಬಳಿಕ ಆಟಗಾರರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ. ಇದೇ ಅನುಭವದಲ್ಲಿ ಈ ಬಾರಿ ಚಾಂಪಿಯನ್ ಆಗುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
“ನಾಲ್ಕನೇ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಲಭಿಸಿರುವುದು ಹೆಮ್ಮೆಯ ಸಂಗತಿ. ಭಾರತದಲ್ಲಿ ನನಗೆ ಇದು ಮೂರನೇ ವಿಶ್ವ ಕಪ್ ಆಗಿದೆ. ತವರು ನೆಲದಲ್ಲಿ ಮೂರು ವಿಶ್ವಕಪ್ ಆಡುವ ಅದೃಷ್ಟ ಬೇರೆ ಯಾವುದೇ ಆಟಗಾರನಿಗೆ ಲಭಿಸಿರಲಿಕ್ಕಿಲ್ಲ. ಆದ್ದರಿಂದ ಈ ವಿಶ್ವ ಕಪ್ ಟೂರ್ನಿ ನನಗೆ ಬಹಳ ವಿಶೇಷವಾಗಿದೆ. ಈ ಬಾರಿಯೂ ನಾನು ಶೇ 100 ರಷ್ಟು ಸಾಮರ್ಥ್ಯದೊಂದಿಗೆ ಆಡುತ್ತೇನೆ. ಟ್ರೋಫಿ ಜಯಿಸುವುದೇ ನನ್ನ ಗುರಿ” ಎಂದು ಶ್ರೀಜೇಶ್ ತಿಳಿಸಿದರು.
ಭಾರತವು ಹಾಕಿ ವಿಶ್ವಕಪ್ ಗೆಲ್ಲದೆ 48 ವರ್ಷಗಳು ಕಳೆದಿವೆ. 1975 ರಲ್ಲಿ ಕೌಲಾಲಂಪುರದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕೊನೆಯದಾಗಿ ಭಾರತ ಚಾಂಪಿಯನ್ ಆಗಿತ್ತು. ಈ ಬಳಿಕ ಭಾರತ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿಲ್ಲ. ಇದೀಗ ಈ ಟೂರ್ನಿಯಲ್ಲಿ ಜಯಿಸುವ ಮೂಲಕ 48 ವರ್ಷಗಳ ಕಪ್ ಬರ ನೀಗಿಸಲು ಆಟಗಾರರು ಸಜ್ಜಾಗಿದ್ದಾರೆ. ಶುಕ್ರವಾರ ಆರಂಭವಾಗಲಿರುವ ಟೂರ್ನಿಯ ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಸ್ಪೇನ್ ವಿರುದ್ಧ ಪೈಪೋಟಿ ನಡೆಸಲಿದೆ.
ಇದನ್ನೂ ಓದಿ | Hockey World Cup | ಹಾಕಿ ವಿಶ್ವ ಕಪ್ ಗೆದ್ದರೆ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ; ಸಿಎಂ ಪಟ್ನಾಯಕ್