ಹಾಂಕಾಂಗ್ : ಆಗಸ್ಟ್ ೩೧ರಂದು ನಡೆದ ಏಷ್ಯಾ ಕಪ್ ಹಣಾಹಣಿಯಲ್ಲಿ ಹಾಂಕಾಂಗ್ ತಂಡ, ಬಲಿಷ್ಠ ಭಾರತ ತಂಡದ ವಿರುದ್ಧ ೪೦ ರನ್‌ಗಳಿಂದ ಸೋತಿದೆ. ಆದರೆ, ತಂಡದ ಉಪನಾಯಕ ಕಿಂಚಿತ್ ಶಾ, ಪಂದ್ಯದ ಸೋಲಿನ ನಡುವೆಯೇ ಪ್ರೀತಿಯಲ್ಲಿ ಗೆದ್ದಿದ್ದಾರೆ. ಪಂದ್ಯ ಮುಗಿದ ಬಳಿಕ ಅವರು ಗ್ಯಾಲರಿಗೆ ತೆರಳಿ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದು, ಆಕೆ ಅದನ್ನು ಸ್ವೀಕರಿಸಿದ್ದಾರೆ. ಅಲ್ಲದೆ, ಕಿಂಚಿತ್ ಕಡೆಯಿಂದ ಉಂಗುರ ತೊಡಿಸಿಕೊಂಡಿದ್ದಾರೆ. ಈ ಸುಂದರ ಕ್ಷಣವು ಸೋಲಿನ ಬೇಸರದಲ್ಲಿದ್ದ ಹಾಂಕಾಂಗ್ ತಂಡದ ಸದಸ್ಯರಿಗೆ ಖುಷಿ ತಂದುಕೊಟ್ಟಿದ್ದು, ತಮ್ಮ ತಂಡದ ಉಪನಾಯಕನ ಪ್ರೀತಿಯ ಗೆಲುವಿಗೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ಪಂದ್ಯ ಮುಕ್ತಾಯಗೊಂಡ ಬಳಿಕ ಗ್ಯಾಲರಿಯಲ್ಲಿ ಕೆಲವೇ ಕೆಲವು ಪ್ರೇಕ್ಷಕರು ಉಳಿದುಕೊಂಡಿದ್ದರು. ಅವರಲ್ಲಿ ಕಿಂಚಿತ್ ಅವರ ಕನಸಿನ ಕನ್ಯೆಯೂ ಇದ್ದರು. ತಕ್ಷಣ ಉಂಗುರ ಸಮೇತ ಗ್ಯಾಲರಿಗೆ ತೆರಳಿದ ಕಿಂಚಿತ್ ಮಂಡಿಯೂರಿ ಕುಳಿತು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಅನಿರೀಕ್ಷಿತವಾಗಿ ಬಂದ ಆಯ್ಕೆಯನ್ನು ಶ್ವೇತ ವರ್ಣದ ದಿರಿಸಿನಲ್ಲಿ ಮಿಂಚುತ್ತಿದ್ದ ಆಕೆಯೂ ಸ್ವೀಕರಿಸಿದ್ದಾರೆ. ಬಳಿಕ ಕುಣಿದು ಕುಪ್ಪಳಿಸಿದ್ದಾರೆ. ಆಕೆ ಒಪ್ಪಿಗೆ ಕೊಡುತ್ತಿದ್ದಂತೆ ಕಿಂಚಿತ್ತೂ ತಡ ಮಾಡದ ಹಾಂಕಾಂಗ್ ಆಟಗಾರ ಉಂಗುರು ತೊಡಿಸಿ ಫೊಟೋ ತೆಗೆಸಿಕೊಂಡಿದ್ದಾರೆ. ಈ ವಿಡಿಯೊ ಎಲ್ಲೆಡೆ ಹರಿದಾಡುತ್ತಿವೆ.
ಭಾರತ ಮೂಲಕ ೨೬ ವರ್ಷದ ಕಿಂಚಿತ್ ಶಾ ಹಾಂಕಾಂಗ್ ತಂಡದ ಕಾಯಂ ಸದಸ್ಯ ಹಾಗೂ ಉಪನಾಯಕ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಅವರು ೪೩ ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, ೬೬೩ ರನ್ ಬಾರಿಸಿದ್ದಾರೆ. ಐರ್ಲೆಂಡ್ ವಿರುದ್ಧ ೨೦೧೯ರಲ್ಲಿ ಬಾರಿಸಿರುವ ೭೯ ರನ್ ಅವರ ಟಿ೨೦ ಅಂತಾರಾಷ್ಟ್ರೀಯ ಗರಿಷ್ಠ ರನ್. ಒಟ್ಟಾರೆ ೧೧ ವಿಕೆಟ್‌ಗಳನ್ನು ಅವರು ಕಬಳಿಸಿದ್ದಾರೆ.
ಬುಧವಾರದ ಪಂದ್ಯದಲ್ಲಿ ಅವರು ಭಾರತ ವಿರುದ್ಧ ೨೮ ಎಸೆತಗಳಿಗೆ ೩೦ ರನ್ ಬಾರಿಸಿದ್ದರು. ಆದಾಗ್ಯೂ ಅವರ ತಂಡ ಭಾರತ ನೀಡಿದ್ದ ೧೯೨ ರನ್‌ಗಳಿಗೆ ಪ್ರತಿಯಾಗಿ ಆಡಿ ೧೫೨ ರನ್‌ಗಳನ್ನು ಮಾತ್ರ ಗಳಿಸಲು ಶಕ್ತಗೊಂಡು ೪೦ ರನ್‌ಗಳಿಂದ ಸೊಲು ಕಂಡಿತ್ತು.
ಇದನ್ನೂ ಓದಿ | Asia Cup | ಹಾಂಕಾಂಗ್ ತಂಡದ ವಿರುದ್ಧ ಭಾರತಕ್ಕೆ 40 ರನ್ ಭರ್ಜರಿ ಜಯ, ಸೂಪರ್ 4 ಹಂತಕ್ಕೆ ಪ್ರವೇಶ