ಇಸ್ಲಾಮಾಬಾದ್: ಫಾರ್ಮ್ ಬಗ್ಗೆ ರನ್ ಮಷೀನ್ ವಿರಾಟ್ ಕೊಹ್ಲಿ (Virat Kohli) ಅವರು ಎಷ್ಟು ತಲೆಕೆಡಿಸಿಕೊಂಡಿದ್ದಾರೋ, ಅದಕ್ಕಿಂತ ಎರಡುಪಟ್ಟು ಕ್ರಿಕೆಟ್ ಜಗತ್ತು, ಕ್ರಿಕೆಟ್ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಅದರಲ್ಲೂ, ಆಗಸ್ಟ್ ೨೭ರಿಂದ ಏಷ್ಯಾ ಕಪ್ ಟೂರ್ನಿ ಆರಂಭವಾಗಲಿದ್ದು, ಎಲ್ಲರ ಕಣ್ಣು ವಿರಾಟ್ ಮೇಲಿವೆ. ಈ ಟೂರ್ನಿಯಲ್ಲಾದರೂ ಕಿಂಗ್ ಕೊಹ್ಲಿ ಲಯಕ್ಕೆ ಮರಳಲಿ ಎಂಬ ನಿರೀಕ್ಷೆ ಇದೆ. ಆದರೆ, ಇಂತಹ ನಿರೀಕ್ಷೆ ಬೆನ್ನಲ್ಲೇ, ಪಾಕ್ ವೇಗಿ ವಸೀಂ ಅಕ್ರಮ್ ಅವರು ಕೊಹ್ಲಿ ಫಾರ್ಮ್‌ಗೆ ಮರಳಲಿಕ್ಕಿಲ್ಲ ಎಂದಿದ್ದಾರೆ.
ಆಗಸ್ಟ್ ೨೮ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಹೈವೋಲ್ಟೇಜ್ ಪಂದ್ಯಕ್ಕೆ ಯುಎಇ ಸಾಕ್ಷಿಯಾಗಲಿದೆ. ಆದರೆ, ವಸೀಂ ಅಕ್ರಮ್ ಅವರು ಕೊಹ್ಲಿ ಬಗ್ಗೆ ಜೋಕ್ ಮಾಡಿದ್ದಾರೆ. “ವಿರಾಟ್ ಕೊಹ್ಲಿ ಒಬ್ಬ ಗ್ರೇಟ್ ಬ್ಯಾಟ್ಸ್‌ಮನ್. ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಅವರು ಶೇ.೫೦ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಕೇವಲ ೩೩ ವರ್ಷಕ್ಕೇ ಅಗಾಧವಾದುದನ್ನು ಸಾಧಿಸಿದ್ದಾರೆ. ಹಾಗಾಗಿ ಖಂಡಿತವಾಗಿಯೂ ಅವರು ಲಯಕ್ಕೆ ಮರಳುವ ವಿಶ್ವಾಸವಿದೆ. ಆದರೆ, ಪಾಕಿಸ್ತಾನ ವಿರುದ್ಧ ಕಮ್‌ಬ್ಯಾಕ್ ಮಾಡಲಿಕ್ಕಿಲ್ಲ” ಎಂದು ಜೋಕ್ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಫಾರ್ಮ್ ಕೈಕೊಟ್ಟಿದೆ. ೨೦೧೯ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೆಂಚುರಿ ಬಾರಿಸಿದ ಅವರು ಇದುವರೆಗೆ ಮತ್ತೊಂದು ಸೆಂಚುರಿ ಬಾರಿಸಲು ಆಗಿಲ್ಲ. ಹಾಗಾಗಿ, ಏಷ್ಯಾ ಕಪ್‌ನಲ್ಲಾದರೂ ಕೊಹ್ಲಿ ಲಯಕ್ಕೆ ಮರಳಲಿ, ಬ್ಯಾಟಿಂಗ್ ವೈಭವ ಮರುಕಳಿಸಲಿ ಎಂಬುದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ಇದನ್ನೂ ಓದಿ | Virat Kohli | ಸ್ಕೂಟರ್ ಹತ್ತಿ ಮುಂಬಯಿಯಲ್ಲಿ ಜಾಲಿ ರೈಡ್ ಹೋದ ವಿರಾಟ್ ಕೊಹ್ಲಿ- ಅನುಷ್ಕಾ ದಂಪತಿ