Site icon Vistara News

WTC Final 2023 : ಐಪಿಎಲ್​ ಮುಗಿಸಿ ಓಡಿ ಬಂದು ಟೆಸ್ಟ್​ ಚಾಂಪಿಯನ್​ ಆಡಿದರೆ ಗೆಲ್ಲುವುದು ಹೇಗೆ? ಕೋಚ್​ ಕಿಡಿ!​

Rahul Dravid speaks with Sourav Ganguly

#image_title

ಲಂಡನ್​: ಓವಲ್​ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದಲ್ಲಿ (WTC Final 2023) ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 209 ರನ್​ಗಳ ಸೋಲನ್ನು ಅನುಭವಿಸಿದೆ. ಇದು ಐಸಿಸಿ ಆಯೋಜಿಸುವ ಈ ಟೂರ್ನಿಯ ಫೈನಲ್​ನಲ್ಲಿ ಭಾರತ ತಂಡಕ್ಕೆ ಸತತ ಎರಡನೇ ಸೋಲು. ಎರಡು ವರ್ಷಗಳ ಹಿಂದೆ ಫೈನಲ್​​ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಂಡವು ಏಳು ವಿಕೆಟ್​ಗಳ ಸೋಲನ್ನು ಅನುಭವಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತಂಡವು ಎರಡೂ ಇನ್ನಿಂಗ್ಸ್​​ಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ನಾಲ್ಕನೇ ಇನಿಂಗ್ಸ್​​ನಲ್ಲಿ 444 ರನ್​​ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಅಂತಿಮ ದಿನ 4 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು. ಆದರೆ, ಐದನೇ ದಿನ 234 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

ಸೋಲಿನ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾರಿ ನಿರಾಸೆ ವ್ಯಕ್ತಪಡಿಸಿದರು. ತಮ್ಮ ತಂಡದ ಸಿದ್ಧತೆಯೇ ಸರಿಯಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಫೈನಲ್​ ಸಿದ್ಧತೆ ಕುರಿತು ಖುಷಿಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಏಕಾಏಕಿ ಬಂದು ವಿಶ್ವ ಕಪ್​ ಫೈನಲ್​ ಆಡಿದರೆ ಗೆಲ್ಲುವುದು ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೊನೇ ತನಕ ಐಪಿಎಲ್ ಆಡಿ ನಂತರದಲ್ಲಿ ಆಟಗಾರರು ಇಂಗ್ಲೆಂಡ್​ಗೆ ಬಂದಿದ್ದರು. ಹೀಗಾದರೆ ಫೈನಲ್ ಗೆಲ್ಲುವುದು ಹೇಗೆ ಎಂದು ದ್ರಾವಿಡ್​ ಸ್ಟಾರ್​ ಸ್ಪೋರ್ಟ್ಸ್​ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಟೀಮ್​ ಇಂಡಿಯಾದ ಕೋಚ್ ಆಗಿ ನನಗೆ ನನ್ನ ತಂಡದ ಸಿದ್ಧತೆ ಬಗ್ಗೆ ಸಮಾಧಾನ ಇಲ್ಲ. ಇದು ನಾನು ಒಪ್ಪಿಕೊಳ್ಳಲು ಸಿದ್ಧನಿರುವ ವಾಸ್ತವ. ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಟೀಮ್​ ಇಂಡಿಯಾದ ವೇಳಾಪಟ್ಟಿಗಳು ಕಠಿಣವಾಗಿವೆ. ತಂಡದ ಆಟಗಾರರಿಗೂ ಇದು ಗೊತ್ತಿದೆ. ಅಂತಾರಾಷ್ಟ್ರೀಯ ಟೂರ್ನಿಗೆ ಮೊದಲು ಸಿದ್ಧತೆಗಳು ಹೆಚ್ಚಿರಬೇಕು. ಕನಿಷ್ಠ ಮೂರು ವಾರಗಳ ಕಾಲ ಅಭ್ಯಾಸ ನಡೆಸಬೇಕು. ಅದಕ್ಕಿಂತ ಮೊದಲು ದ್ವಿಪಕ್ಷೀಯ ಸರಣಿಗಳನ್ನು ಆಡಿರಬೇಕು ಎಂದು ಅವರು ಹೇಳಿಕೊಂಡಿದ್ದಾರೆ.

ನಮ್ಮಲ್ಲಿ ಉತ್ತಮ ಅಭ್ಯಾಸಕ್ಕೆ ಅಥವಾ ದ್ವಿಪಕ್ಷೀಯ ಸರಣಿ ಆಡುವ ಪರಿಸ್ಥಿತಿ ಇಲ್ಲ. ನಮಗೆ ಏನು ಸಾಧ್ಯವೋ ಅದನ್ನು ನಾವು ಮಾಡುತ್ತಿದ್ದೇವೆ. ಅದಕ್ಕಾಗಿ ಯಾವುದೇ ನೆಪಗಳನ್ನು ಹೇಳುವುದಿಲ್ಲ ಫೈನಲ್ ಗೆದ್ದ ಆಸ್ಟ್ರೇಲಿಯಾವನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಅವರು ಎಲ್ಲಾ ಐದು ದಿನಗಳಲ್ಲಿ ನಮಗಿಂತ ಉತ್ತಮವಾಗಿ ಆಡಿದರು ಎಂದು ದ್ರಾವಿಡ್​ ಹೊಗಳಿದ್ದಾರೆ.

ಇದನ್ನೂ ಓದಿ : WTC Final 2023 : ಫೈನಲ್​ನಲ್ಲಿ ಸೋತ ಬಳಿಕವೂ ದೊಡ್ಡ ಮೊತ್ತ ಜೇಬಿಗಿಳಿಸಿದ ರೋಹಿತ್​ ಶರ್ಮಾ ಬಳಗ!

ನಾವು ನಮ್ಮ ಪ್ರದರ್ಶನವನ್ನು ಅವಲೋಕನ ಮಾಡಬೇಕು. ನಾವು ಹೇಗೆ ಉತ್ತಮಗೊಳ್ಳಬಹುದು ಮತ್ತು ನಾವು ಏನು ಸುಧಾರಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಭಾರತದ ಮುಖ್ಯ ಕೋಚ್ ಹೇಳಿದ್ದಾರೆ.

ಫೈನಲ್​ ಪಂದ್ಯದ ಐದು ದಿನಗಳಲ್ಲಿಯೂ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಿತು. ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 469 ರನ್​​ಗಳ ಬೃಹತ್ ಸ್ಕೋರ್ ದಾಖಲಿಸಿತು. ಬಳಿಕ ಭಾರತ ತಂಡವನ್ನು 296 ರನ್​ಗಳಿಗೆ ಆಲೌಟ್ ಮಾಡಿತು. ರಹಾನೆ (89 ರನ್​) ಮತ್ತು ಶಾರ್ದೂಲ್ ಠಾಕೂರ್ (51 ರನ್​) ಬಾರಿಸದೇ ಹೋಗಿದ್ದರೆ ಭಾರತದ ಸ್ಥಿತಿ ಹೀನಾಯವಾಗಿರುತ್ತಿತ್ತು ಎರಡನೇ ಇನಿಂಗ್ಸ್​​ನಲ್ಲಿ ಭಾರತದ ವೇಗಿಗಳು ಮತ್ತೆ ಪ್ರಭಾವ ಬೀರಲು ವಿಫಲವಾದ ಕಾರಣ ಆಸೀಸ್ 270/8 ಸ್ಕೋರ್ ಮಾಡುವ ಮೂಲಕ ಮತ್ತೊಂದು ಪ್ರಭಾವಶಾಲಿ ಪ್ರದರ್ಶನ ನೀಡಿತು.

Exit mobile version