ಬೆಂಗಳೂರು: ಸಚಿನ್ ತೆಂಡೂಲ್ಕರ್ (Sachin Tendulkar) ಜಾಗತಿಕ ಕ್ರಿಕೆಟ್ನ ಬ್ರಾಂಡ್ ಅಂಬಾಸಿಡರ್ ಎನಿಸಿಕೊಂಡಿದ್ದಾರೆ. ಸಾವಿರಾರು ಕ್ರಿಕೆಟಿಗರಿಗೆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪ್ರೇರಣೆಯಾಗಿರುವ ಅವರು ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಪಾಲಿನ ಅಚ್ಚುಮೆಚ್ಚಿನ ಕ್ರಿಕೆಟಿಗ. ಅವರಿಗೆ ಏಪ್ರಿಲ್ 24ಕ್ಕೆ ಅವರಿಗೆ 50 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟ್ನಲ್ಲಿ ಪ್ರಖ್ಯಾತಿ ಗಳಿಸಲು ಇರುವ ಪ್ರಮುಖ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
- ಸಚಿನ್ ತೆಂಡೂಲ್ಕರ್ ಅವರು ಹುಟ್ಟಿದ್ದೇ ಕ್ರಿಕೆಟ್ಗಾಗಿ ಎಂಬ ಮಾತಿದೆ. ಕ್ರಿಕೆಟ್ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ಅದೇ ಕ್ಷೇತ್ರದಲ್ಲಿ ಬೃಹತ್ ಸಾಧನೆ ಮಾಡಿದ್ದಾರೆ. ವೃತ್ತಿ ಕ್ರಿಕೆಟ್ನಲ್ಲಿ ಹಲವು ಏರಿಳಿತಗಳನ್ನು ಕಂಡ ಹೊರತಾಗಿಯೂ ಅಂಜದೇ, ಕುಸಿಯದೇ ಸಾಧನೆ ಹಾದಿಯಲ್ಲಿ ಮುಂದುವರಿದಿದ್ದರು.
- 16ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸಚಿನ್ ತೆಂಡೂಲ್ಕರ್ ವೇಗದ ಬೌಲರ್ಗಳನ್ನು ಎದುರಿಸಲು ಪರದಾಡಿದ್ದರು. ಪಾಕ್ ವೇಗಿಗಳಂತೂ ಸಚಿನ್ ಅವರನ್ನು ವ್ಯಂಗ್ಯವಾಡಿದ್ದರು. ಆದರೆ, ಅವರೆಲ್ಲರಿಗೂ ಬ್ಯಾಟ್ ಮೂಲಕವೇ ಉತ್ತಮ ಕೊಟ್ಟಿದ್ದಾರೆ ಸಚಿನ್.
- ಸಚಿನ್ ತೆಂಡೂಲ್ಕರ್ ಅವರ ಮೂಗಿಗೆ ಚೆಂಡು ಬಡಿದು ಗಾಯವಾಗಿತ್ತು. ಈ ವೇಳೆ ಅವರ ಬಳಿ ಸಹ ಆಟಗಾರರು ಆಟ ಮುಂದುವರಿಸಬೇಡಿ ಎಂದು ಸಲಹೆ ಕೊಟ್ಟಿದ್ದರು. ಆದರೆ, ಸಚಿನ್ ನೋವಿನ ನಡುವೆಯೇ ಆಡಿದ್ದರು. ಆಡುವುದು ಬೇಡ ಎಂದಾಗ, ‘ನಹೀ, ಮೆ ಖೇಲೆಗಾ; ಎಂದು ಸಚಿನ್ ಅಂದು ಹೇಳಿದ ಮಾತು ಇಂದಿಗೂ ಪ್ರಚಲಿತದಲ್ಲಿದೆ.
- ಸಚಿನ್ ತೆಂಡೂಲ್ಕರ್ ಕ್ರಿಕೆಟ್ನಲ್ಲಿ ಹಲವು ದಾಖಲೆಗಳ ಸರದಾರ. ಕೆಲವೊಂದು ದಾಖಲೆಗಳನ್ನು ಬೇರೆ ಆಟಗಾರರು ಮುರಿದಿದ್ದೂ ಇನ್ನೂ ಹಲವು ದಾಖಲೆಗಳನ್ನು ಮುರಿಯುವುದು ಅಷ್ಟೊಂದು ಸುಲಭವಲ್ಲ. ಒಟ್ಟಿನಲ್ಲಿ ಅವರು ದಾಖಲೆಗಳ ಸರದಾರ.
- ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ 68 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಏಕ ದಿನ ಮಾದರಿಯಲ್ಲಿ 96 ಅರ್ಧ ಶತಕ ದಾಖಲಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 116 ಹಾಗೂ ಲಿಸ್ಟ್ ಎ ಕ್ರಿಕೆಟ್ನಲ್ಲಿ 114 ಅರ್ಧ ಶತಕಗಳು ಅವರ ಖಾತೆಯಲ್ಲಿವೆ. ಐಪಿಎಲ್ ಸೇರಿದಂತೆ ಎಲ್ಲ ಮಾದರಿಯ ಟಿ20 ಕ್ರಿಕೆಟ್ನಲ್ಲಿ 16 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
- ಸಚಿನ್ ತೆಂಡೂಲ್ಕರ್ ಅವರು 100 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ಈ ದಾಖಲೆಯನ್ನು ಮುರಿಯುವುದು ಸುಲಭವಲ್ಲ. ತಮ್ಮ ಸಾಧನೆಗಾಗಿ ಅವರು ಭಾರತ ರತ್ನ ಗೌರವ ಪಡೆದುಕೊಂಡಿದ್ದಾರೆ.
- 2007ರ ಏಕ ದಿನ ವಿಶ್ವ ಕಪ್ ಬಳಿಕದ ನಾಲ್ಕು ವರ್ಷ ಸಚಿನ್ ತೆಂಡೂಲ್ಕರ್ ಉತ್ತಮ ಬ್ಯಾಟಿಂಗ್ ರೆಕಾರ್ಡ್ ಹೊಂದಿದ್ದಾರೆ. ಈ ಅವಧಿಯಲ್ಲಿ ಅವರು 24 ಶತಕಗಳನ್ನು ಬಾರಿಸಿದ್ದರು.
- 24 ವರ್ಷಗಳ ಕಾಲ ಕ್ರಿಕೆಟ್ ಆಡಿರುವ ಸಚಿನ್ ತೆಂಡೂಲ್ಕರ್ ಹಲವು ಬಾರಿ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಟೆನಿಸ್ ಎಲ್ಬೊ ಸಮಸ್ಯೆ ಅವರನ್ನು ಬಿಡದೇ ಸತಾಯಿಸಿತ್ತು. ಬಳಿಕ ಸರ್ಜರಿ ಮಾಡಿಕೊಂಡು ಸುಧಾರಿಸಿಕೊಂಡಿದ್ದರು.
- ಚೆನ್ನೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟಸ್ಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಬಾರಿಸಿರುವ 136 ರನ್ ಸ್ಮರಣೀಯ. ಭಯಂಕರ ಬೆನ್ನು ನೋವಿನ ನಡುವೆ ಅವರು ಅಂದು ಪಾಕಿಸ್ತಾನದ ಬೌಲರ್ಗಳಿಗೆ ಸೆಡ್ಡು ಹೊಡೆದಿದ್ದರು.
- 2007ರಿಂದ 11ರವರೆಗೆ ಸಚಿನ್ ತೆಂಡೂಲ್ಕರ್ 24 ಶತಕಗಳನ್ನು ಬಾರಿಸಿದ ಹೊರತಾಗಿಯೂ ಅವರು ಅತಿ ಹೆಚ್ಚು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಟೆನಿಸ್ ಎಲ್ಬೊ ಹಾಗೂ ಗಾಲ್ಫರ್ ಎಲ್ಬೊ ಸಮಸ್ಯೆಗೆ ಅವರು ಒಳಗಾಗಿದ್ದರು.
- 20 ವರ್ಷಕ್ಕೂ ಅಧಿಕ ಕ್ರಿಕೆಟ್ ಆಡಿದ್ದ ಸಚಿನ್ಗೆ ಏಕ ದಿನ ವಿಶ್ವ ಕಪ್ ಗೆಲ್ಲದಿರುವ ಬೇಸರವಿತ್ತು. 2011ರಲ್ಲಿ ಅದನ್ನೂ ಅವರು ಸಾಕಾರ ಮಾಡಿಕೊಂಡಿದ್ದರು.